ರೈತರ ಬದುಕನ್ನೇ ಒದ್ದೆಮುದ್ದೆ ಮಾಡಿದ ಮಳೆ ; ಬೆಳೆಹಾನಿಯಾಗಿ ರೈತರ ಬದುಕು ಅತಂತ್ರ

11tvk01 bele hani..
Published on

ತುರುವೇಕೆರೆ : ಬಿಟ್ಟು ಬಿಡದೆ ಸುರಿದ ಮಳೆಯಿಂದ ಅತಿವೃಷ್ಟಿ ಉಂಟಾಗಿ ರೈತರ ಪಾಡು ಹೇಳತೀರದಾಗಿದೆ. ತಾಲೂಕಿನಲ್ಲಿ ನೂರಾರು ಹೆಕ್ಟೇರ್ ರಾಗಿ, ಅವರೆ, ತೊಗರಿ, ತೆಂಗು ಅಡಿಕೆ, ಬಾಳೆ ಬೆಳೆಗಳಿಗೂ ಹಾನಿಯಾಗಿ ಅಪಾರ ನಷ್ಟವಾಗಿದೆ.

ತಾಲೂಕಿನಲ್ಲಿ ಹೆಚ್ಚು ಕೃಷಿಯನ್ನೇ ಅವಲಂಬಿತರಾಗಿದ್ದ ರೈತರಿಗೆ ಈ ಬಾರಿ ಹೆಚ್ಚು ಪೆಟ್ಟು ಬಿದ್ದಂತಾಗಿದೆ. ಸುಮಾರು 51793 ರೈತ ಕುಟುಂಬಗಳಿದ್ದು 23,426 ಹೆಕ್ಟೇರ್ ಕೃಷಿ ಭೂಮಿಯಲ್ಲಿ ಬೇಸಾಯ ಕೈಗೊಂಡಿದ್ದರು. 4 ಹೋಬಳಿಗಳಲ್ಲಿ ರಾಗಿ, ಹುರುಳಿ, ಅವರೆ, ತೊಗರಿ ಬೆಳೆಗಳು ಶೇ.80ಕಿಂತ ಹೆಚ್ಚು ಹಾನಿಯಾಗಿದೆ. ಕಸಭಾ ಹೋಬಳಿಯಲ್ಲಿ 2751, ದಂಡಿನಶಿವರ 960, ದೆಬ್ಬೇಘಟ್ಟ 5636, ಮಾಯಸಂದ್ರ 4709 ಹೆಕ್ಷೇರ್ ಸೇರಿ ತಾಲೂಕಿನಲ್ಲಿ 14056 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆ ಸಂಪೂರ್ಣ ನಾಶವಾಗಿದೆ.

ವಾಣಿಜ್ಯ ಬೆಳೆಗಳಿಗೂ ಸಂಕಷ್ಟ: ಸತತವಾಗಿ ಸುರಿದ ಮಳೆಯಿಂದ ರೈತರಿಗೆ ಕೇವಲ ರಾಗಿ ಬೆಳೆಯಷ್ಟಲ್ಲದೆ ಸುಮಾರು 25 ಸಾವಿರ ಹೆಕ್ಟೇರ್ ಪ್ರದೇಶದಲ್ಲಿರುವ ತೆಂಗು, ಅಡಕೆ ಬಾಳೆಗೂ ಸಂಕಷ್ಟ ಉಂಟಾಗಿದೆ. ತೆಂಗು ಹಾಗೂ ಅಡಕೆ ತೋಟಗಳಲ್ಲಿ ನೀರು ನಿಂತು ಫಸಲು ಕೀಳದಂತ ಸ್ಥಿತಿ ನಿರ್ಮಾಣವಾಗಿದೆ.

ವಾಡಿಕೆ ಮಳೆಗಿಂತ ಹೆಚ್ಚು : ಪ್ರಸಕ್ತ ವಾರ್ಷಿಕ ವಾಡಿಕೆ ಮಳೆ 665 ಮಿ.ಮೀ ದಾಖಲಾಗಿದ್ದರೆ. ಈ ವರ್ಷದಲ್ಲಿ 766 ಮಿ.ಮೀ ದಾಖಲೆ ಮಳೆ ಸುರಿದಿದೆ. ಹೇಮಾವತಿ ನೀರಿನ ಜತೆಗೆ ಮಳೆ ನೀರು ಹರಿದ ಪರಿಣಾಮ ಹೊಲ, ಗದ್ದೆ ತೋಟಗಳಲ್ಲಿ ನೀರು ನಿಂತು ಬೆಳೆ ನಾಶವಾಗಿದ್ದು ಕೆರೆ, ಕಟ್ಟೆಗಳು ತುಂಬಿದ ಪರಿಣಾಮ ಅಂತರ್ಜಲ ಹೆಚ್ಚಾಗಿ ಬೋರ್‌ವೆಲ್‌ಗಳಲ್ಲಿ ನೀರು ಉಕ್ಕುವಂತಾಗಿದೆ.

ಸತತ ಮಳೆಯಿಂದಾಗಿ ರಾಗಿ ಹುಲ್ಲು ಸಹ ಹಾಳಾಗಿದ್ದು ದನಕರುಗಳಿಗೂ ಮೇವು ಸಿಗದಂತಾಗಲಿದೆ. ಬಿಸುಲು ಬಾರದೆ ಹೊಲಗಳಲ್ಲಿ ರಾಗಿ ಹುಲ್ಲು ಓಣಗದೆ ರಾಗಿ ಮೊಳಕೆ ಆಗಿದ್ದು, ಮೇವಿನ ಕೊರತೆಯಾದರೆ ರಾಸುಗಳನ್ನು ಸಾಕುವುದು ಹೇಗೆ ಎಂಬ ಚಿಂತೆ ರೈತರನ್ನು ಕಾಡುತ್ತಿದೆ.

ಸರ್ಕಾರದ ಆದೇಶದಂತೆ ಕಂದಾಯ ಇಲಾಖೆ ಹಾಗೂ ಕೃಷಿ ಇಲಾಕೆ ಆಶ್ರಯದಲ್ಲಿ ಮಳೆಯಿಂದ ಹಾನಿಯಾದ ಪ್ರದೇಶವನ್ನು ಸಮೀಕ್ಷೆ ನಡೆಸಿ ಅಂದಾಜು ಮಾಡಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ರೈತರು ಬೆಳೆ ಪರಿಹಾರಕ್ಕೆ ಕೃಷಿ ಇಲಾಖೆಗೆ ಅರ್ಜಿ ಸಲ್ಲಿಸಿದ್ದು ಡಿ. 21ವರಗೂ ಅರ್ಜಿ ಸಲ್ಲಿಸಬಹುದಾಗಿದೆ.

ಪೂಜಾ ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ

ಒಂದು ಎಕರೆಯಲ್ಲಿ ಕೃಷಿ ಮಾಡಲು 20 ಸಾವಿರ ರೂಪಾಯಿಗೂ ಹೆಚ್ಚು ಖರ್ಚು ಬರಲಿದೆ. ಆದರೆ ಈ ಬಾರಿ ಮಳೆ ಹೆಚ್ಚು ಸುರಿದ ಪರಿಣಾಮ ರೈತರ ಕೈಗೆ ಸಲು ಸಿಗುತ್ತಿಲ್ಲ, ಬಾರಿ ನಷ್ಟ ಅನುಭವಿಸುವಂತಾಗಿದೆ. ರೈತರು ಸಂಕಷ್ಟದಲ್ಲಿದ್ದು ಸರ್ಕಾರ ಸೂಕ್ತ ಪರಿಹಾರ ನೀಡಬೇಕು.

ಶ್ರೀನಿವಾಸ್‌ಗೌಡ ರೈತ ಸಂಘ ಅಧ್ಯಕ್ಷ

ಎರಡು ಎಕರೆ ಜಮೀನಿನಲ್ಲಿ ಸಾಲ ಮಾಡಿ ರಾಗಿ ಬೆಳೆದಿದ್ದು, ಎಡಬಿಡದೆ ಸುರಿದ ಮಳೆಯಿಂದ ಬೆಳೆ ನೆಲಕಚ್ಚಿದೆ. ರಾಗಿ ಬೆಳೆ ಕೈಗೆ ಬಾರದಂತಾಗಿ ತಲೆ ಮೇಲೆ ಕೈಹೊತ್ತು ಕೂರುವಂತ ಸ್ಥಿತಿ ನಿರ್ಮಾಣವಾಗಿದೆ.

ಸಂತೋಷ್ ರೈತ. ವಡಿಕೆಘಟ್ಟ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net