ದಾಖಲೆ ಮಳೆಯಾದರೂ ನಿಲ್ಲದ ನೀರು; ಬರಿದಾಗಿವೆ ಹೆಬ್ಬೂರು, ಗೂಳೂರು ಭಾಗದ ಕೆರೆ ;ಕಾವೇರಿ ಸೇರುತ್ತಿದೆ ‘ಹೇಮಾವತಿ’

7bc2ddbf-bdb1-46fd-869e-4a0820c4dbf8
Published on

ತುಮಕೂರು: ಜಿಲ್ಲೆಯಲ್ಲಿ ಕಳೆದ ಮೂರು ದಶಕಗಳಲ್ಲಿಯೇ ಈ ಬಾರಿ ಅತೀ ಹೆಚ್ಚು ಮಳೆ ಸುರಿದಿದ್ದು, ಕೆಲವು ಭಾಗದಲ್ಲಿ ಅಂತರ್ಜಲ ಮಟ್ಟ ಭಾರಿ ಏರಿಕೆಯಾಗಿದೆ. ಮಿತಿಮೀರಿದ ಮರಳುಗಾರಿಕೆ ನಡುವೆಯೂ ಭೂಮಿ ನೀರು ಕುಡಿದಿದ್ದು ಕೊಳವೆಬಾವಿಗಾಗಿ ಜೀವನವನ್ನೇ ಸವೆಸಿರುವ ರೈತರ ಬಾಳಲ್ಲಿ ಹರ್ಷ ಮೂಡಿಸಿದೆ.

ಇನ್ನೊಂದೆಡೆ ಹೇಮಾವತಿ ಹಾಗೂ ಮಳೆಯ ನೀರು ನದಿ, ಸಮುದ್ರ ಪಾಲಾಗುತ್ತಿದ್ದರೂ ತುಮಕೂರು ತಾಲೂಕು ಗೂಳೂರು, ಹೆಬ್ಬೂರು ಭಾಗದ ಕೆರೆಗಳು ಖಾಲಿಯಾಗಿದ್ದು, ಜಿಲ್ಲೆಯಲ್ಲಿ ಹರಿಯುವ ನೀರನ್ನು ಹಿಡಿದಿಟ್ಟುಕೊಳ್ಳುವ ಸಮಗ್ರ ನೀರಾವರಿ ಯೋಜನೆಯ ಕೊರತೆ ಎದ್ದು ಕಾಣುತ್ತಿದೆ.

ಜಿಲ್ಲೆಯ ಬಹುದೊಡ್ಡ ಕೆರೆಗಳೆಂಬ ಹೆಗ್ಗಳಿಕೆ ಹೊಂದಿರುವ ಕಡಬ, ಮದಲೂರು, ತೀತಾ, ಬೋರನಕಣಿವೆ, ಮಾರ್ಕೋನಹಳ್ಳಿ, ಮಲ್ಲಾಘಟ್ಟ ಸೇರಿ ಪ್ರಮುಖ ಕೆರೆಗಳೆಲ್ಲ ತುಂಬಿವೆ. ಈ ಜಲಾನಯನ ಪ್ರದೇಶದ ಕೊಳವೆಬಾವಿಗಳಲ್ಲಿ ನೀರು ಕೂಡ ಚಿಮ್ಮುತ್ತಿದೆ.

ಅಂತರ್ಜಲ ಮಟ್ಟ ಹೆಚ್ಚಳವನ್ನು ಉನ್ನತೀಕರಣ ಪ್ರಕ್ರಿಯೆ (ಅಪ್‌ಲ್‌ಟಿ ಪ್ರೊಸೆಸ್) ಎನ್ನಲಾಗುತ್ತಿದೆ. ಅಂತರ್ಜಲ ಹೆಚ್ಚಳ ರೈತರಿಗೆ ಖುಷಿ ತಂದಿದ್ದರೆ ಬಹುತೇಕ ಹಳೆಯ ಮನೆಗಳು, ಗುಣಮಟ್ಟ ವಿಲ್ಲದ ಕಟ್ಟಡಗಳ ಬುಡವನ್ನೇ ಅಲುಗಾಡಿಸಲಾರಂಭಿಸಿದೆ.

ಮಳೆ ನೀರು ವೇಗವಾಗಿ ಭೂಮಿಯಿಂದ ಮೇಲ್ಪದರಕ್ಕೆ ನೂಕಲ್ಪಡುವಾಗ ಅದಕ್ಕೆ ತಕ್ಕದಾದ ಪ್ರತಿರೋಧ ಒಡ್ಡಿ ತಡೆಯುವ ಸಾಮರ್ಥ್ಯ ಮನೆ, ಕಟ್ಟಡಗಳ ತಳಹದಿಗೆ ಇರಬೇಕು. ಆದರೆ, ಅಂತಹ ಸಾಮರ್ಥ್ಯ ಹಳ್ಳಿಗಳಲ್ಲಿನ ಬಹುತೇಕ ಮನೆಗಳಿಗೆ ಇಲ್ಲದಿರುವುದು ಮನೆಗಳ ಆಯಸ್ಸನ್ನು ಕಡಿಮೆ ಮಾಡಲಿದೆ, ಹಳೆಯ ಮನೆಗಳು ಕುಸಿದುಬೀಳುವ ಅಪಾಯವೂ ಇದೆ.

ಕಳೆದ ಮೂವತ್ತು ವರ್ಷದಿಂದ ಕಾಣದ ಮಳೆ ಈಗ ಸುರಿದಿದೆ, ಬಹುತೇಕ ಕಡೆಗಳಲ್ಲಿ ರಾಜಕಾಲುವೆ, ಕೆರೆಗಳನ್ನು ಒತ್ತುವರಿ ಮಾಡಿ ಮನೆ ಸೇರಿದಂತೆ ಕಟ್ಟಡ ನಿರ್ಮಿಸಲಾಗಿದೆ, ಅವೆಲ್ಲಾ ಈಗ ಅಪಾಯಕ್ಕೆ ತುತ್ತಾಗಿವೆ. ಇದೀಗ ಜಲಮೂಲಗಳು ತಮ್ಮ ದಾರಿ ಹುಡುಕಿಕೊಂಡು ಮುನುಗ್ಗುತ್ತಿವೆ. ಹಾಗಾಗಿ, ಒತ್ತಡಗಳನ್ನು ತಡೆಯಲಾಗದೆ ಕಟ್ಟಡಗಳು ನೆಲಕ್ಕೆ ಕುಸಿಯುವಂತಾಗಿದ್ದು ಜಿಲ್ಲೆಯಲ್ಲಿ 500ಕ್ಕೂ ಮನೆಗಳು ಕುಸಿದುಬಿದ್ದಿವೆ.

ನಿರ್ವಹಣೆ ಇಲ್ಲದ ಕೆರೆ-ಕಟ್ಟೆಗಳು ಒಡೆದಿವೆ, ತೂಬಿನಲ್ಲಿ ನೀರು ಪೋಲಾಗುತ್ತಿವೆ, ಕೆರೆ ಹಾನಿಗೊಳಗಾದರೆ ನೆರೆಯ ಕೆರೆಗಳೂ ಹಾನಿಯಾಗುತ್ತವೆ. ಕೆರೆಗಳ ಕೋಡಿಗಳನ್ನು ವ್ಯವಸ್ಥಿತವಾಗಿ ನಿರ್ಮಿಸಬೇಕು. ಜತೆಗೆ ಅದರ ಸಾಮರ್ಥ್ಯವನ್ನು ನಿಗದಿತವಾಗಿ ಪರೀಕ್ಷಿಸುತ್ತಿರಬೇಕು.

ಕಾವೇರಿ ಒಡಲು ಸೇರುತ್ತಿದೆ ‘ಹೇಮಾವತಿ’! : ವಿಪರೀತ ಮಳೆಯಿಂದ ಹೇಮಾವತಿ ನೀರಿನ ಅಗತ್ಯ ಪ್ರಸ್ತುತ ವರ್ಷಕ್ಕಿಲ್ಲ ಎನ್ನುವಂತಾಗಿದೆ, ಜಿಲ್ಲೆಗೆ ಬಂದ ಹೇಮಾವತಿ ನೀರು ಕೆರೆಗಳನ್ನೆಲ್ಲಾ ಸ್ಪರ್ಶಿಸಿ ಮತ್ತೆ ಹಿಂದಿರುಗಿ ಕಾವೇರಿ ಒಡಲು ಸೇರುತ್ತಿದ್ದು, ಜಿಲ್ಲೆಯ ಪಾಲಿನ ಹಂಚಿಕೆಯಾದ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಸಾಮರ್ಥ್ಯ ನಮಗಿಲ್ಲವೆ ಎಂಬ ಸಂಶಯ ಕಾಡಲಾರಂಭಿಸಿದೆ. ಜಿಲ್ಲೆಯಲ್ಲಿ ಇನ್ನೂ ತುಂಬಬೇಕಾದ ಕೆರೆಗಳಿವೆ, ಎಲ್ಲ ಭಾಗದಲ್ಲೂ ಸಾಕಾಗುವಷ್ಟೇನು ಮಳೆ ಆಗಿಲ್ಲ, ತುಮಕೂರು, ಕುಣಿಗಲ್ ಭಾಗದಲ್ಲಿ ನೀರು ಬರುವ ಮಳೆ ಸುರಿದಿಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ, ದೂರದೃಷ್ಟಿಯ ಅಭಾವದಿಂದ ಹೇಮಾವತಿ ನೀರು ಮತ್ತೆ ಕಾವೇರಿ ನದಿ ಸೇರುತ್ತಿದೆ, ಮದಲೂರು ಮೂಲಕ ಸಮುದ್ರಕ್ಕೂ ಹೋಗಲಿದೆ. ವ್ಯರ್ಥವಾಗಿ ಹೋಗುವ ನೀರನ್ನು ನೀರಿಲ್ಲದೆ ಉಳಿದಿರು ಕೆರೆಗಳಿಗೆ ಹರಿಸುವ ಯೋಜನೆಗಳ ಅಗತ್ಯವಿದೆ, ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನವಾಗಬೇಕಿದೆ.

ಜಿಲ್ಲೆಯಲ್ಲಿ ಸಾಕಷ್ಟು ನೀರು ಹರಿದರೂ ಅದನ್ನು ಎಲ್ಲ ಭಾಗಕ್ಕೆ ಹರಿಸುವ ಸಮಗ್ರ ನೀರಾವರಿ ಯೋಜನೆಯ ಕೊರತೆ ಈ ವರ್ಷ ಅನಾವರಣವಾಗಿದೆ. 30-40 ವರ್ಷಗಳ ಹಿಂದಿನ ಯೋಜನೆಗೆ ಜೋತು ಬಿದ್ದಿದ್ದಾರೆ. ಅತಿವೃಷ್ಟಿ ಕಾಣಿಸಿಕೊಂಡಾಗ ನೀರಿನ ಸದುಪಯೋಗ ಮಾಡಿಕೊಳ್ಳುವ ಯೋಜನೆ ಸಿದ್ಧವಾಗಬೇಕಿದೆ. ಪ್ರಾದೇಶಿಕ, ರಾಜಕೀಯ, ಜಾತಿ ಹಾಗೂ ಜಲಾನಯನ ಪ್ರದೇಶಗಳನ್ನು ಬದಿಗೊತ್ತಿ ಇಡೀ ಜಿಲ್ಲೆಯ ರತರ, ಜನರ ಬದುಕಿಗೆ ಪೂರಕವಾದ ಶಾಶ್ವತ ಯೋಜನೆ ರೂಪಿಸಬೇಕಿದೆ. ಬಿ.ವಿ.ಗುಂಡಪ್ಪ ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆ, ತುಮಕೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net