

ತುಮಕೂರು : ಜಿಲ್ಲೆಯಾದ್ಯಂತ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಸಾಕಷ್ಟು ಆಸ್ತಿಪಾಸ್ತಿ, ಜಾನುವಾರು, ಬೆಳೆಹಾನಿ ಸಂಭವಿಸಿದೆ. 32 ಜಾನುವಾರುಗಳ ಸತ್ತಿದ್ದರೆ, 310ಕ್ಕೂ ಹೆಚ್ಚು ಮನೆಗಳು ಭಾಗಶಃ ಹಾನಿಗೊಂಡಿವೆ. 65 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿರುವ ಅಂದಾಜಿದೆ.
ಜಿಲ್ಲೆಯಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ತೊಂದರೆಯಾಗಿದ್ದಲ್ಲಿ, ಆಯಾ ತಹಸೀಲ್ದಾರ್‌ಗಳು ಸ್ವತಃ ಪರಿಶೀಲಿಸಿ ತುರ್ತಾಗಿ ಪರಿಹಾರ ವಿತರಿಸಬೇಕು ಎಂದು ಶನಿವಾರ ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಸೂಚನೆ ನೀಡಿದರು.
ಮಾನವ ಹಾಗೂ ಜಾನುವಾರು ಪ್ರಾಣಹಾನಿ ಉಂಟಾದಲ್ಲಿ ತಹಶೀಲ್ದಾರ್ ಮತ್ತು ಪಶು ಸೇವಾ ಮತ್ತು ಪಶು ವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕರು ಸ್ವತಃ ಪರಿಶೀಲಿಸಿ ನಿಯಮಾನುಸಾರ ಪರಿಹಾರ ವಿತರಿಸಬೇಕು ಎಂದರು.
ನವೆಂಬರ್‌ನಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಜಿಲ್ಲೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ರಾಗಿ ಬೆಳೆ ಹೆಚ್ಚಿನ ಪ್ರಮಾಣದಲ್ಲಿ ಹಾಳಾಗಿದೆ. ತೋಟಗಾರಿಕಾ ಬೆಳೆಗಳೂ ಹಾಳಾಗಿವೆ. ಹಾನಿಗೊಳಗಾಗಿರುವ ಪ್ರಕರಣಗಳ ಸಂಬಂಧ ಅಧಿಕಾರಿಗಳು ಪರಿಶೀಲಿಸಿ, ಸರ್ವೇ ಕಾರ್ಯ ಕೈಗೊಂಡಿರುವುದಾಗಿ ಹೇಳಿದರು.
ಮಳೆಯಿಂದ ಮನೆ ಹಾನಿ ಉಂಟಾದಲ್ಲಿ ಸಂಬಂಧಿಸಿದ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ಹಾನಿಗೊಳಗಾಗಿರುವ ಮನೆಯ 4 ದಿಕ್ಕಿನ ಭಾವಚಿತ್ರ ಮತ್ತು ಅಗತ್ಯ ದಾಖಲೆಗಳನ್ನು ಪಡೆದು ಹಾನಿಯ ಪ್ರಮಾಣದ ಅನುಸಾರ ತಕ್ಷಣವೇ ಆರ್‌ಜಿಆರ್‌ಎಚ್‌ಸಿಎಲ್ ತಂತ್ರಾಂಶದಲ್ಲಿ ಮಾಹಿತಿ ನಮೂದಿಸಿ ಜಿಲ್ಲಾಧಿಕಾರಿಗಳ ಅನುಮೋದನೆಗೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು.
ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಬೆಳೆ ನಷ್ಟದ ಕುರಿತು ಸಂಬಂಧಿಸಿದ ಅಧಿಕಾರಿಗಳು ಜಂಟಿ ಸಮೀಕ್ಷೆಯನ್ನು ಕೈಗೊಂಡು ಬೆಳೆ ಹಾನಿಯ ಬಗ್ಗೆ ಪರಿಹಾರ ತಂತ್ರಾಂಶದಲ್ಲಿ ಮಾಹಿತಿ ನೀಡಲು ಕ್ರಮ ಕೈಗೊಳ್ಳಬೇಕು. ಜಂಟಿ ಸಮೀಕ್ಷೆಯಲ್ಲಿ ಕಂದಾಯ, ತೋಟಗಾರಿಕೆ ಮತ್ತು ಕೃಷಿ ಇಲಾಖೆಯ ಎಲ್ಲ ಅಧಿಕಾರಿ, ಸಿಬ್ಬಂದಿ ಪಾಲ್ಗೊಂಡು ತುರ್ತಾಗಿ ಸಮೀಕ್ಷೆ ಕಾರ್ಯವನ್ನು ಪೂರ್ಣಗೊಳಿಸಬೇಕು. ಸಕಾಲದಲ್ಲಿ ನಮೂದಿಸದೇ ವಿಳಂಬಿಸಿದಲ್ಲಿ, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ವೈ.ಎಸ್. ಪಾಟೀಲ್ ಎಚ್ಚರಿಕೆ ನೀಡಿದರು.
6 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ : ಮಾರ್ಕೋನಹಳ್ಳಿ ಡ್ಯಾಂಗೆ ನೀರಿನ ಒಳಹರಿವು ಹೆಚ್ಚಾಗಿದೆ. 6 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಮಳೆಯ ಪ್ರಮಾಣ ಹೆಚ್ಚಾದರೆ ಡ್ಯಾಂನ ಒಳಹರಿವಿನ ನೀರಿನ ಪ್ರಮಾಣ ಹೆಚ್ಚಾಗಲಿದೆ. ಇದರಿಂದ ಹೊರ ಹರಿವಿನ ನೀರಿನ ಪ್ರಮಾಣ ಹೆಚ್ಚಿಸುವ ಸಾಧ್ಯತೆ ಇದೆ. ಆದ್ದರಿಂದ, ಡ್ಯಾಂ ಹಿಂಭಾಗದಲ್ಲಿರುವ ಗ್ರಾಮಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಕಾಳಜಿ ಕೇಂದ್ರ, ವಸತಿ ಮತ್ತು ಊಟದ ವ್ಯವಸ್ಥೆ ಮಾಡಲು ಪೂರ್ವಸಿದ್ಧತೆ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಎಡಿಸಿ ಕೆ. ಚನ್ನಬಸಪ್ಪ ಸೂಚಿಸಿದರು.
ಎಲ್ಲ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿದ್ದು, ಮಳೆಯಿಂದಾದ ಹಾನಿ ಪ್ರಕರಣಗಳ ಪರಿಸ್ಥಿತಿ ಬಗ್ಗೆ ಸ್ವತಃ ಅವಲೋಕಿಸಬೇಕು. ಮಳೆಯಿಂದ ರಸ್ತೆ, ಕೆರೆ, ಮನೆ ಸೇರಿ ಯಾವುದೇ ಹಾನಿಗೆ ಸಂಬಂಧಿಸಿದ ದೂರು, ಮನವಿ ಬಂದಲ್ಲಿ ತಕ್ಷಣ ಕಾರ್ಯಪ್ರವೃತ್ತರಾಗಿ ಸಮಸ್ಯೆಯನ್ನು ಪರಿಹರಿಸಬೇಕು. ವೈ.ಎಸ್.ಪಾಟೀಲ ಜಿಲ್ಲಾಧಿಕಾರಿ