ಆಲಿಕಲ್ಲು ಮಳೆಗೆ ಉದುರಿದ ಟೊಮ್ಯಾಟೊ ಹಾಗೂ ಮಾವು ಬೆಳೆಗೆ

7 Srinivaspur 1
Published on

ಶ್ರೀನಿವಾಸಪುರ: ತಾಲೂಕಿನ ನೆಲವಂಕಿ ಹೋಬಳಿಯ ಪುಲಗೂರುಕೋಟ ಪಂಚಾಯಿತಿ ಸೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೋಮವಾರ ಸಂಜೆ ಬಿದ್ದ ಆಲಿಕಲ್ಲು ಮಳೆಗೆ ಸುಲಿಗೆ ಬಂದಿದ್ದ ಟೊಮ್ಯಾಟೊ ಹಾಗೂ ಮಾವು ಬೆಳೆಗೆ ಅಪಾರ ಹಾನಿಯಾಗಿದ್ದು, ಅಕಾಲಿಕ ಮಳೆ ರೈತನ ಬದುಕಿನ ಮೇಲೆ ಬರೆ ಎಳೆದಂತಾಗಿದೆ.

ಕರೊನಾ ಹಿನ್ನೆಲೆಯಲ್ಲಿ ಇಡೀ ದೇಶ ಲಾಕ್‌ಡೌನ್ ಆಗಿರುವುದರಿಂದ ತರಕಾರಿ ಬೆಳೆಗಳ ಸಾಗಾಣಿಕೆಗೆ ಹಾಗೂ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಬೆಳೆದ ಬೆಳೆಗಳು ತೋಟದಲ್ಲೇ ಕೊಳೆಯುವಂತಾಗಿದೆ. ಲಾಕ್‌ಡೌನ್ ಮುಗಿದ ನಂತರವಾದರೂ ಬೆಳೆಗೆ ಉತ್ತಮ ಬೆಲೆ ಬರಬಹುದು ಎಂಬ ನಂಬಿಕೆಯಿಂದ ಆರೈಕೆ ಮಾಡಿ ಈಗ ತಾನೇ ಸುಲಿಗೆ ಬರುತ್ತಿರುವ ಟೊಮ್ಯಾಟೊ ಹಾಗೂ ಇತರ ಬೆಳೆಗಳಿಗೆ ಸೋಮವಾರ ಬಿದ್ದ ಆಲಿಕಲ್ಲು ಮಳೆ ರೈತರ ಆಸೆಗೆ ಮಣ್ಣು ಎರಚಿದಂತಾಗಿದೆ.

ಪುಲಗೂರುಕೊಟೆ ಪಂಚಾಯಿತಿಯ ದಾಸಾರ‌್ಲಹಳ್ಳಿಯ ಚೌಡರೆಡ್ಡಿ ಎಂಬುವರಿಗೆ ಸೇರಿದ 4 ಎಕರೆ ಟೊಮ್ಯಾಟೊ ತೋಟ ಸಂಪೂರ್ಣ ಹಾನಿಯಾಗಿದ್ದಲ್ಲದೆ 5 ಎಕರೆಯಲ್ಲಿದ್ದ ಮಾವು ಗಾಳಿಗ ಉದುರಿವೆ. ಲಕ್ಷ್ಮೀಪುರ ಪಂಚಾಯಿತಿಗೆ ಸೇರಿದ ಗ್ರಾಮಗಳಲ್ಲಿಯೂ ಮಳೆಗೆ ನೂರಾರು ರೈತರ ತೋಟಗಳಿಗೆ ಹಾನಿಯಾಗಿವೆ.

ವರ್ಷಪೂರ್ತಿ ಜೀವನೋಪಾಯಕ್ಕೆ ನಂಬಿದ್ದ ಮಾವಿನ ಸಲು ಈಗ ಹಾನಿಯಾಗಿದ್ದು, ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಬರದ ಜಿಲ್ಲೆಗೆ ಮಳೆ ವರದಾನವಾದರೂ ಬೆಳೆಗಾಗರಿಗೆ ಮಾತ್ರ ಶಾಪವಾಗಿದೆ.

ಟೊಮ್ಯಾಟೊ ತೋಟದ ಮೇಲೆ ಆಲಿಕಲ್ಲು ಬಿದ್ದರೆ ಪಸಲಿಗೆ ಬಂದಿದ್ದ ಕಾಯಿ ಕೊಳೆತು ಹೋಗುತ್ತದೆ ಹಾಗೂ ಎಲೆಗಳು ಸುಟ್ಟುಹೋಗಿ ಗಿಡ ಬೆಳವಣಿಗೆ ಕುಂಠಿತವಾಗುತ್ತದೆ. 4 ಎಕರೆ ತೋಟ ಭಸ್ಮವಾಗಿದೆ. ಸರ್ಕಾರ ಪರಿಹಾರ ನೀಡಬೇಕು. ತೋಟಗಾರಿಕೆ ಇಲಾಖೆಯವರು ಭೇಟಿ ನೀಡಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ನೀಡಬೇಕು.

ಚೌಡರೆಡ್ಡಿ, ರೈತ, ದಾಸಾರ‌್ಲಹಳ್ಳಿ

ಹಾನಿಯಾದ ತೋಟಗಳಿಗೆ ಭೇಟಿ ನೀಡಿ ವರದಿ ಸಲ್ಲಿಸುವಂತೆ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಬೈರಾರೆಡ್ಡಿಗೆ ಸೂಚನೆ ನೀಡಲಾಗಿದೆ. ವರದಿ ಬಂದ ನಂತರ ಸರ್ಕಾರಕ್ಕೆ ವರದಿ ನೀಡಲಾಗುವುದು.

ಶ್ರೀನಿವಾಸ್, ತಹಸೀಲ್ದಾರ್, ಶ್ರೀನಿವಾಸಪುರ

7 ಶ್ರೀನಿವಾಸಪುರ 1 +1

ಸೋಮವಾರ ತಾಲೂಕಿನಲ್ಲಿ ಬಿದ್ದ ಆಲಿಕಲ್ಲು ಮಳೆ ಹಾಗೂ ಬಿರುಗಾಳಿಯಿಂದ ಮಾವು ಉದುರಿರುವುದು.

7 ಶ್ರೀನಿವಾಸಪುರ 1

ಟೊಮ್ಯಾಟೊ ಸಲಿನ ಮೇಲೆ ಆಲಿಕಲ್ಲು ಬಿದ್ದು ಬೆಳೆ ನಷ್ಠವಾಗಿರುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net