‘ವಿಕಸಿತ ಭಾರತ’ ರೈಲ್ವೆ ಪಾತ್ರ ದೊಡ್ಡದು

Bommai
Published on

ಗದಗ: ಭಾರತವನ್ನು ವಿಕಸಿತ ಭಾರತ ಮಾಡುವಲ್ಲಿ ರೈಲ್ವೆ ಇಲಾಖೆಯ ಪಾತ್ರ ದೊಡ್ಡದಾಗಿದೆ. ಅದನ್ನು ಅರಿತು ಪ್ರಧಾನಿ ನರೇಂದ್ರ ಮೋದಿ ಅವರು ರೈಲು ಮತ್ತು ರಸ್ತೆಗಳ ಅಭಿವೃದ್ಧಿ ಮಾಡುತ್ತಿದ್ದಾರೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ನೈರುತ್ಯ ರೈಲ್ವೆ ಹುಬ್ಬಳ್ಳಿ ವಿಭಾಗ ಏರ್ಪಡಿಸಿದ್ದ ಅಮೃತ ಭಾರತ ಯೋಜನೆ ಅಡಿ ನವೀಕರಣಗೊಂಡಿರುವ ಗದಗ ರೈಲ್ವೆ ನಿಲ್ದಾಣದ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಪಾಲ್ಗೊಂಡು ಮಾತನಾಡಿದ ಅವರು, ಐತಿಹಾಸಿಕ ಗದಗಿನ ರೈಲ್ವೆ ನಿಲ್ದಾಣ ಅಭಿವೃದ್ಧಿಗೆ ಸುಮಾರು 23 ಕೋಟಿ ರೂ. ಖರ್ಚು ಮಾಡಿರುವುದು ಸಂತಸ ತಂದಿದೆ. ಗದಗ ಐತಿಹಾಸಿಕ ನಾಡು. ಮುದ್ರಣ ಕಾಶಿಯಾಗಿ ಪ್ರಸಿದ್ಧಿ ಪಡೆದಿದೆ. ಬೆಟಗೇರಿ ಕೈಮಗ್ಗಗಳಿಗೆ ಪ್ರಸಿದ್ಧಿಯಾಗಿದೆ. ಕೈಗಾರಿಕೆ, ವಾಣಿಜ್ಯ ಮತ್ತು ಪ್ರವಾಸೋದ್ಯಮಕ್ಕೆ ನವೀಕೃತ ರೈಲು ನಿಲ್ದಾಣ ಬಲ ಕೊಡಲಿದೆ ಎಂದು ಹೇಳಿದರು.

ಗದಗನಿಂದ ಹುಬ್ಬಳ್ಳಿಗೆ 1884ರಲ್ಲಿ ಮೊದಲ ರೈಲು ಆರಂಭವಾಯಿತು. ಈ ನಿಲ್ದಾಣಕ್ಕೆ ಸುದೀರ್ಘ ಇತಿಹಾಸವಿದೆ. ಈ ರೈಲ್ವೆ ನಿಲ್ದಾಣದಿಂದ ಪ್ರತಿ ದಿನ 5000ಕ್ಕೂ ಹೆಚ್ಚು ಪ್ರಯಾಣಿಕರು ಸಂಚರಿಸುತ್ತಾರೆ. ಈ ನಿಲ್ದಾಣವನ್ನು ಅಮೃತ ಯೋಜನೆ ಅಡಿ ಎಸ್ಕ್‌ಲೇಟರ್, ಲಿಫ್ಟ್, ಓವರ್‌ಬಿಜ್, ಫುಟ್‌ಓವರ್ ಬಿಜ್, ಶೌಚಗೃಹ ಸೇರಿದಂತೆ ಪ್ರಯಾಣಿಕರಿಗೆ ಎಲ್ಲ ರೀತಿಯ ಸವಲತ್ತು ನೀಡಲಾಗಿದೆ ಎಂದರು.

ಬ್ರಾಡ್‌ಗೇಜ್, ಡಬಲ್ ಗೇಜ್, ವಿದ್ಯುದ್ದೀಕರಣ ಮತ್ತು ಸಿಗ್ನಲ್‌ಗಳನ್ನು ಆಧುನಿಕರಣ ಮಾಡಿ ಅತೀ ವೇಗದ 500ಕ್ಕೂ ಹೆಚ್ಚು ವಂದೇ ಭಾರತ ರೈಲುಗಳು ದೇಶದಲ್ಲಿ ಸಂಚರಿಸುವ ಮೂಲಕ ರೈಲ್ವೆಯಲ್ಲಿ ದೊಡ್ಡ ಕ್ರಾಂತಿಯಾಗುತ್ತಿದೆ. ರೈಲ್ವೆಯನ್ನು ಜನಾನುರಾಗಿ ಮಾಡುವುದು, ವಾಣಿಜ್ಯಾಭಿವೃದ್ಧಿ ಮಾಡಲಾಗುತ್ತಿದೆ. ಭಾರತವನ್ನು ವಿಕಸಿತ ಭಾರತ ಮಾಡುವಲ್ಲಿ ರೈಲ್ವೆ ಪ್ರಮುಖ ಪಾತ್ರ ವಹಿಸುತ್ತದೆ. ಇದನ್ನು ಅರಿತು ರೈಲ್ವೆ ಮತ್ತು ರಸ್ತೆಗಳ ಅಭಿವೃದ್ಧಿ ಮಾಡುತ್ತಿರುವುದು ಶ್ಲಾಘನೀಯ ಎಂದು ಬೊಮ್ಮಾಯಿ ಹೇಳಿದರು.

ಗದಗ-ವಾಡಿ ಮಾರ್ಗದಿಂದ ಹೈದರಾಬಾದ್ ಸನಿಹ: ಗದಗ- ವಾಡಿ ರೈಲ್ವೆ ಲೈನ್ ಯೋಜನೆಯು ಪ್ರಗತಿಯಲ್ಲಿದೆ. ಅದು ಪೂರ್ಣವಾದರೆ ಹೈದರಾಬಾದ್ ಸಂಪರ್ಕ ಅನುಕೂಲವಾಗಲಿದೆ. ಕೇಂದ್ರ ಸಚಿವ ಜೋಶಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಒತ್ತಾಸೆಯಿಂದ ಗದಗ- ಯಲವಗಿ ಹೊಸ ಮಾರ್ಗ ಅನುಮೋದನೆಯಾಗಿದೆ. ಈ ಸಂಪರ್ಕ ಜೊಡಣೆಯಾದರೆ ಹಾವೇರಿ, ಗದಗ ಮೂಲಕ ಹೈದರಾಬಾದ್ ಪ್ರಯಾಣಿಸಲು ಅನುಕೂಲವಾಗಲಿದೆ ಎಂದು ಬೊಮ್ಮಾಯಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net