

ಬೆಳಗಾವಿ: ರೈಲ್ವೆ ಇಲಾಖೆ ಜನರ ಜೀವನಾಡಿಯಾಗಿದ್ದು, ಲಾಕ್‌ಡೌನ್ ಸಂದರ್ಭದಲ್ಲೂ ವಲಸೆ ಕಾರ್ಮಿಕರಿಗೆ ವಿವಿಧ ರಾಜ್ಯಗಳಲ್ಲಿ ಪ್ರಯಾಣಿಸಲು ಅನುಕೂಲತೆ ಕಲ್ಪಿಸಿದೆ. ಅವರಿಗೆಲ್ಲ ನರೇಗಾ ಯೋಜನೆಯಡಿ ಉದ್ಯೋಗಾವಕಾಶ ಕಲ್ಪಿಸಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದರು.
ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರೀಸ್ (ಸಿಐಐ) ಬೆಳಗಾವಿ ವತಿಯಿಂದ ಆಯೋಜಿಸಿದ್ದ ನ್ಯೂ ಎಜ್ ಕನೆಕ್ಟಿವಿಟಿ ಮತ್ತು ಲಾಜಿಸ್ಟಿಕ್ಸ್ ವಿಷಯದ ಕುರಿತು ಶುಕ್ರವಾರ ಆಯೋಜಿಸಿದ್ದ ವಿಡಿಯೋ ಸಂವಾದದಲ್ಲಿ ಪಾಲ್ಗೊಂಡು ‘ಲಾಜಿಸ್ಟಿಕ್ಸ್ ಹಾಗೂ ಸಪ್ಲಾಯ್ ಚೈನ್’ ವಿಷಯದ ಮೇಲೆ ತಮ್ಮ ಅಭಿಪ್ರಾಯ ಮಂಡಿಸಿ ಮಾತನಾಡಿದರು.
ಉದ್ಯಮ ಕ್ಷೇತ್ರಕ್ಕೆ ಬನ್ನಿ: ಪ್ರಧಾನಮಂತ್ರಿ ಅವರು ಆತ್ಮ ನಿರ್ಭರ ಭಾರತ ಯೋಜನೆಯಡಿ ಭಾರತ ದೇಶವನ್ನು ಅಭಿವೃದ್ಧಿ ಪಥದತ್ತ ಕರೆದೊಯ್ಯಬಹುದಾಗಿದೆ. ಇದರಿಂದಾಗಿ ದೇಶಗಳಲ್ಲಿರುವ ನಿರುದ್ಯೋಗಿ ಜನರಿಗೆ ಉದ್ಯೋಗಾವಕಾಶ ಕಲ್ಪಿಸಲಾಗಿದೆ. ಕಾರ್ಮಿಕರಿಗೆ ಉಚಿತವಾಗಿ ಆಹಾರ ಧಾನ್ಯ ವಿತರಿಸಲಾಗಿದೆ. ವೋಕಲ್ ಫಾರ್ ವೋಕಲ್ ಅಡಿ ಸ್ಥಳೀಯರಿಗೆ ಉದ್ಯೋಗವಕಾಶ ಕಲ್ಪಿಸುವುದು ಇಂದಿನ ದಿನದಲ್ಲಿ ಅವಶ್ಯಕವಾಗಿದೆ ಎಂದು ಸಚಿವರು ಪ್ರಸ್ತಾಪಿಸಿದರು. ಜಿಐ ಅಧ್ಯಕ್ಷರು ಹಾಗೂ ಅಶೋಕ ಐರನ್ ವರ್ಕ್ಸ್ ವ್ಯವಸ್ಥಾಪಕ ನಿರ್ದೇಶಕ ಜಯಂತ ಹುಂಜರವಾಡಿ, ಬೆಳಗಾವಿ ಏರ್ ಪೋರ್ಟ್ ನಿರ್ದೇಶಕ ರಾಜೇಶ್‌ಕುಮಾರ್ ಮೌರ್ಯ, ಸಿಐಐ ಇನ್ಸ್ಟಿಟ್ಯೂಟ್ ಆಫ್ ಲಾಜಿಸ್ಟಿಕ್ಸ್‌ನ ಕಾರ್ಯ ನಿರ್ವಾಹಕ ನಿರ್ದೇಶಕ ಮಹಿಂಧರ ಹಾಗೂ ಇತರರಿದ್ದರು.