ರೈಲು ಹಳಿ ತಪ್ಪಿಸಲು ಯತ್ನ, ಆರ್‌ಪಿಎಫ್ ಇಂಟೆಲಿಜೆನ್ಸ್ ವಿಭಾಗದಿಂದ ತನಿಖೆ

railwaytrack
Published on

ಕಾಸರಗೋಡು: ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಯಲ್ಲಿ ರೈಲು ಹಳಿ ತಪ್ಪಿಸಿ ಭೀಕರ ದುರಂತ ಉಂಟು ಮಾಡಲು ಪ್ರಯತ್ನ ನಡೆದಿದ್ದು, ಈ ಬಗ್ಗೆ ರೈಲ್ವೆ ಭದ್ರತಾ ಪಡೆ( ಆರ್‌ಪಿಎಫ್) ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ತನಿಖೆ ಕೈಗೊಂಡಿದೆ.

ಅವಳಿ ಜಿಲ್ಲೆಗಳಲ್ಲಿ ಏಳು ಕಡೆ ರೈಲು ಹಳಿಯ ಮೇಲೆ ಕಗ್ಗಲ್ಲು ಇರಿಸಿ, ರೈಲು ಹಳಿ ತಪ್ಪಿಸುವ ಮೂಲಕ ಭಾರಿ ಪ್ರಮಾಣದ ಸಾವು-ನೋವು ಉಂಟಾಗುವಂತೆ ಮಾಡಲು ದುಷ್ಕರ್ಮಿಗಳು ಸಂಚು ರೂಪಿಸಿದ್ದರು ಎಂದು ಇಂಟೆಲಿಜೆನ್ಸ್ ವಿಭಾಗ ತಿಳಿಸಿದೆ. ಕಾಸರಗೋಡು ಹಾಗೂ ಕಣ್ಣೂರು ಜಿಲ್ಲೆಯ ಉಪ್ಪಳ ಸನಿಹದ ಮುಟ್ಟಂ ಗೇಟ್, ಕೋಟಿಕುಳಂ, ಕಣ್ಣಾಪುರಂ, ಕಣ್ಣೂರ್ ಸೌತ್‌ವಳಪಟ್ಟಣಂ ಹಾಗೂ ಪಾಪಿನಶ್ಯೇರಿಯಲ್ಲಿ ರೈಲು ಹಳಿ ತಪ್ಪಿಸುವ ಯತ್ನ ನಡೆಸಲಾಗಿದೆ. ಉಪ್ಪಳ ಸನಿಹದ ಮುಟ್ಟಂ ಗೇಟ್ ಬಳಿ ಜುಲೈ 17ರಂದು ಹಳಿಯಲ್ಲಿ ಬೃಹತ್ ಕಲ್ಲನ್ನಿರಿಸಲಾಗಿದ್ದು, ಮಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ರೈಲಿನ ಲೋಕೋ ಪೈಲಟ್‌ನ ಕರ್ತವ್ಯ ಪ್ರಜ್ಞೆಯಿಂದ ದುರಂತ ತಪ್ಪಿತ್ತು. ಈ ಬಗ್ಗೆ ರೈಲ್ವೆ ಇಲಾಖೆ ಸೀನಿಯರ್ ಇಂಜಿನಿಯರ್ ರಂಜಿತ್ ಕುಮಾರ್ ದೂರಿನ ಹಿನ್ನೆಲೆಯಲ್ಲಿ ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಈ ಹಿಂದೆ ಹಲವು ಬಾರಿ ರಾತ್ರಿ ವೇಳೆ ರೈಲಿಗೆ ಕಲ್ಲು ತೂರಾಟ, ಹಳಿಯಲ್ಲಿ ಕಲ್ಲು, ಕಬ್ಬಿಣದ ವಸ್ತುಗಳನ್ನು ಇರಿಸುವ ಕೃತ್ಯ ನಡೆದಿತ್ತು. ಕೃತ್ಯದ ಹಿಂದೆ ಉಗ್ರ ಸಂಘಟನೆ ಕೈವಾಡವಿರುವ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net