ರೈಲ್ವೇ ಗೇಟ್‌ಗೆ ಮೇಲ್ಸೇತುವೆ ನಿರ್ಮಿಸಿ

28 HBH 01
ಹಗರಿಬೊಮ್ಮನಹಳ್ಳಿಯಲ್ಲಿ ಆಟೋ ಚಾಲಕರು ಮತ್ತು ಮಾಲೀಕ ಸಂಘದಿಂದ ಪ್ರತಿಭಟನೆ ನಡೆಯಿತು. ನಂದಿಪುರ ಮಠದ ಡಾ.ಮಹೇಶ್ವರ ಸ್ವಾಮೀಜಿ, ಕಿನ್ನಾಳ್ ಸುಭಾಷ, ಜಗನ್ನಾಥ್, ಉಪ್ಪಾರ್ ವೆಂಕಟೇಶ್ ಹಾಗೂ ಕೆ.ಕೈಲಾಸ್‌ನಾಥ್ ಇದ್ದರು.
Published on

ಹಗರಿಬೊಮ್ಮನಹಳ್ಳಿ: ಪಟ್ಟಣದಲ್ಲಿ ರಾಮನಗರ ಮತ್ತು ಚಿತ್ರಮಂದಿರದ ರಸ್ತೆಯ ರೈಲ್ವೇ ಗೇಟ್‌ಗಳಿಂದ ಜನರಿಗೆ ತೊಂದರೆಯಾಗುತ್ತಿದ್ದು, ಮೇಲ್ಸೇತುವೆ ನಿರ್ಮಿಸಬೇಕು ಎಂದು ಒತ್ತಾಯಿಸಿ ಆಟೋ ಚಾಲಕರು ಮತ್ತು ಮಾಲೀಕರಿಂದ ಗುರುವಾರ ಪ್ರತಿಭಟನಾ ರ‌್ಯಾಲಿ ನಡೆಯಿತು.

ಪ್ರತಿಭಟನೆ ಬೆಂಬಲಿಸಿ ಮಾತನಾಡಿದ ನಂದಿಪುರ ಮಠದ ಡಾ.ಮಹೇಶ್ವರ ಸ್ವಾಮೀಜಿ, ಈ ಹೋರಾಟ ನಿನ್ನೆ-ಮೊನ್ನೆಯದಲ್ಲ. ನಿರಂತರ ನಡೆಯುತ್ತಿದೆ. ರೈಲ್ವೇ ಗೇಟ್ ಹಾಕಿದಾಗ ಆಟೋ ಚಾಲಕರಿಗೆ, ತುರ್ತು ಸಂದರ್ಭದಲ್ಲಿ ಜನರಿಗೆ ತೀವ್ರ ತೊಂದರೆಯಾಗುತ್ತಿದೆ. ಆದಷ್ಟು ಬೇಗ ಮೇಲ್ಸೇತುವೆ ನಿರ್ಮಿಸಬೇಕೆಂದು ಒತ್ತಾಯಿಸಿದರು.

ಸಿಪಿಐ ತಾಲೂಕು ಕಾರ್ಯದರ್ಶಿ ಎಸ್.ಜಗನ್ನಾಥ್ ಮಾತನಾಡಿ, ರೈಲುಗಳು ಕ್ರಾಸಿಂಗ್ ಸಂದರ್ಭ ಅಥವಾ ಗೂಡ್ಸ್ ರೈಲು ಬಂದಾಗ ಬಹುತೇಕ ಎರಡು ಗೇಟ್‌ಗಳು ಬಂದ್ ಆಗಿ ಕನಿಷ್ಠ ಅರ್ಧಗಂಟೆ ಸಮಯ ವ್ಯರ್ಥವಾಗುತ್ತದೆ. ಮಳೆ-ಬಿಸಿಲಿನಲ್ಲಿ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸಮಸ್ಯೆ ಪರಿಹಾರಕ್ಕೆ ಶಾಸಕರು, ಸಂಸದರು ಕ್ರಮವಹಿಸಬೇಕು ಎಂದರು.

ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ವೆಂಕಟೇಶ ಉಪ್ಪಾರ ಮಾತನಾಡಿ, ರೈಲ್ವೇ ಗೇಟ್ ಹಾಕಿದಾಗ ರೋಗಿಗಳು, ಬಾಣಂತಿಯರು ಸಂಕಷ್ಟ ಅನುಭವಿಸುತ್ತಿದ್ದಾರೆ. ರಾಜ್ಯ ಹೆದ್ದಾರಿ ಹಾಗೂ 23 ವಾರ್ಡ್‌ಗಳಲ್ಲಿನ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಸರಿಪಡಿಸಬೇಕು. ಯೋಜನೆ ಪ್ರಕಾರ ಪ್ರತಿಭಟನೆಗೆ ಪಟ್ಟಣ ಬಂದ್ ಮಾಡಿಸಬೇಕಿತ್ತು. ಆದರೆ, ಜನರಿಗೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ರ‌್ಯಾಲಿ ಕೈಗೊಳ್ಳಲಾಗಿದೆ. ಸಂಬಂಧಿತರು ಗಮನ ಹರಿಸಬೇಕು ಎಂದು ಆಗ್ರಹಿಸಿದರು.

ಹಿರಿಯ ಮುಖಂಡ ಕಿನ್ನಾಳ್ ಸುಭಾಷ್, ಸಮಿತಿಯ ಸತೀಶ್ ಪಾಟೀಲ್, ಆಟೋ ಸಂಘದ ಗೌರವಾಧ್ಯಕ್ಷ ಕೆ.ಕೈಲಾಸಮೂರ್ತಿ ಮಾತನಾಡಿದರು. ಬಳಿಕ ಉಪತಹಸೀಲ್ದಾರ್ ಶಿವಕುಮಾರ್‌ಗೌಡ ಮೂಲಕ ಸಂಸದ ಈ.ತುಕಾರಾಮ್‌ಗೆ ಮನವಿ ಸಲ್ಲಿಸಲಾಯಿತು. ಮುಖಂಡರಾದ ಚಿಂತ್ರಪಳ್ಳಿ ಫಕ್ಕೀರಪ್ಪ, ಫೋಟೋ ರಾಮಣ್ಣ, ಗದ್ದಿಕೆರೆ ನಾಗಭೂಷಣ, ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಎಂ.ಬಾಬು ಫಕೃದ್ದೀನ್, ಶ್ರೀನಿವಾಸ, ಎನ್.ವಿಠೋಬ, ಎಚ್.ಕೆ.ಅಹಮದ್ ರಾಜ್, ಮಂಜುನಾಥ, ರಾಮು, ಶಶಿಧರ, ಎಂ.ಬಿ.ಜಿಲಾನ್, ಜಾನ್, ಹುಲುಗಪ್ಪ, ಎಚ್.ಕಲ್ಯಾಣ್‌ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net