

ಕುಷ್ಟಗಿ: ಕುಷ್ಟಗಿ-ನರಗುಂದ-ಘಟಪ್ರಭಾ ಹೊಸ ರೈಲು ಮಾರ್ಗದ ಸಮೀಕ್ಷೆಗೆ ಅನುಮೋದನೆ ನೀಡುವಂತೆ ಒತ್ತಾಯಿಸಿ ಕುಷ್ಟಗಿ ಹಾಗೂ ನರಗುಂದ ರೈಲ್ವೆ ಹೋರಾಟ ಸಮಿತಿ ಪದಾಧಿಕಾರಿಗಳು ಹುಬ್ಬಳ್ಳಿ ನೈಋತ್ಯ ವಲಯದ ಪ್ರಧಾನ ವ್ಯವಸ್ಥಾಪಕ ಕಾರ್ಯದರ್ಶಿ ಜಿ.ಸುನೀಲ್ ಗೆ ಗುರುವಾರ ಮನವಿ ಸಲ್ಲಿಸಿದರು.
ಹೊಸ ಬ್ರಾಡ್‌ಗೇಜ್ ಮಾರ್ಗ ಕುಷ್ಟಗಿಯಿಂದ ಗದಗ ಜಿಲ್ಲೆ ಗಜೇಂದ್ರಗಡ, ರೋಣ, ನರಗುಂದ, ಸವದತ್ತಿ, ಯರಗಟ್ಟಿ, ಮುನವಳ್ಳಿ, ಗೋಕಾಕ್ ಮೂಲಕ ಘಟಪ್ರಭಾ ಸಂಪರ್ಕಿಸಲಿದೆ. ಹೊಸ ಮಾರ್ಗ ಪರಿಗಣಿಸಿ ಸಮೀಕ್ಷೆಗೆ ಅನುಮೋದನೆ ನೀಡಬೇಕು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ, ಬೆಳಗಾವಿ ಸಂಸದ ಜಗದೀಶ ಶೆಟ್ಟರ್, ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ, ಬಾಗಲಕೋಟೆ ಸಂಸದ ಪಿ.ಪಿ.ಗದ್ದಿಗೌಡರ್, ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳಗೆ ಈಗಾಗಲೇ ಪ್ರತ್ಯೇಕ ಮನವಿ ಸಲ್ಲಿಸಲಾಗಿದೆ.
ಹೊಸ ಮಾರ್ಗ ಆರಂಭದಿಂದ ಸರಕು ಸಾಗಣೆ, ಪ್ರವಾಸೋದ್ಯಮ ಹಾಗೂ ಪ್ರಯಾಣಿಕರ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ನರಗುಂದ ಹೋರಾಟ ಸಮಿತಿ ಅಧ್ಯಕ್ಷ ಚನ್ನಬಸಪ್ಪ ನಂದಿ ಹಾಗೂ ಕುಷ್ಟಗಿ ಹೋರಾಟ ಸಮಿತಿ ಕಾರ್ಯದರ್ಶಿ ವೀರೇಶ ಬಂಗಾರಶೆಟ್ಟರ್ ಮನವರಿಕೆ ಮಾಡಿಕೊಟ್ಟರು. ಶಾಂತರಾಜ ಗೋಗಿ, ಮಂಜುನಾಥ ಮಹಾಲಿಂಗಪುರ ಇತರರು ಇದ್ದರು.