

ಉಡುಪಿ: ಇಂದ್ರಾಳಿ ರೈಲ್ವೇ ನಿಲ್ದಾಣದಲ್ಲಿ ಮಂಗಳವಾರ ಮುಂಬೈಗೆ ತೆರಳಲು ರೈಲು ಹತ್ತುವ ವೇಳೆ ಮಹಿಳೆಯೊಬ್ಬರ ಬ್ಯಾಗ್‌ನಿಂದ 4 ಲಕ್ಷ ಮೌಲ್ಯದ ಚಿನ್ನಾಭರಣ ಕಳವಾಗಿದ್ದು, ಮಣಿಪಾಲ ಠಾಣೆಯಲ್ಲಿ ದೂರು ದಾಖಲಾಗಿ 12 ಗಂಟೆಯೊಳಗೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಭದ್ರಾವತಿ ಮೂಲದ ಇಬ್ಬರು ಕಳ್ಳಿಯರನ್ನು ಬಂಧಿಸಿದ್ದಾರೆ.
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಲಲಿತಾ ಬೋವಿ ( 41 ವರ್ಷ) ಹಾಗೂ ಸುಶೀಲಮ್ಮ ಬೋವಿ (64 ವರ್ಷ) ಬಂಧಿತರು. ಬುಧವಾರ ಬೆಳಗ್ಗೆ 6:30ಕ್ಕೆ ಟೈಗರ್ ಸರ್ಕಲ್ ಬಳಿ ಬಸ್ಸಿಗಾಗಿ ಕಾಯುತ್ತಿದ್ದವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸರು. ಆರೋಪಿತರಿಂದ ಕಳುವಾದ 4,03,000 ರೂ ಮೌಲ್ಯದ 100 ಗ್ರಾಂ ಬಂಗಾರದ ಆಭರಣ ಹಾಗೂ ವಾಚ್ ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಗಮನ ಬೇರೆಡೆ ಸೆಳೆದು ಕಳ್ಳತನ ಮಾಡುವುದು , ಪಿಕ್ ಪಾಕೇಟ್ ಹಾಗೂ ಜನಸಂದಣಿಯಲ್ಲಿ ಹಿರಿಯ ನಾಗರಿಕರನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುವ ಚಾಳಿ ಹೊಂದಿದ್ದು, ಈ ಹಿಂದೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪೊಲೀಸ್ ಠಾಣೆ ಸೇರಿದಂತೆ ರಾಜ್ಯದ ಇತರೆ ಕಡೆಗಳಲ್ಲಿ ಪ್ರಕರಣ ದಾಖಲಾಗಿರುವುದು ಕಂಡು ಬಂದಿದೆ.
ಘಟನೆ ವಿವರ
ಕುತ್ಯಾರು ಕೇಂಜಾ ಹೊಸ ಮನೆ ನಿವಾಸಿ ಪುನೀತಾ ಹೆಗ್ಡೆ (69) ಅವರು ಮಂಗಳವಾರ 3.35ಕ್ಕೆ ತಮ್ಮ ಕುಟುಂಬದೊಂದಿಗೆ ಮುಂಬಯಿಗೆ ಹೋಗಲು ರೈಲು ಹತ್ತಿದ್ದು, ತಮ್ಮ ವ್ಯಾನಿಟಿ ಬ್ಯಾಗ್‌ನಲ್ಲಿ ಬಂಗಾರದ ಒಡವೆಗಳನ್ನು ಒಂದು ಕವರ್‌ನಲ್ಲಿ ಹಾಕಿ ಬಟ್ಟೆಗಳ ಮಧ್ಯೆ ಇಟ್ಟಿದ್ದು ಬ್ಯಾಗನ್ನು ಹೆಗಲಿನಲ್ಲಿ ಹಾಕಿಕೊಂಡಿದ್ದರು. ರೈಲು ಹೊರಟ ಬಳಿಕ ಸೀಟ್ ನಲ್ಲಿ ಕುಳಿತಾಗ ವ್ಯಾನಿಟಿ ಬ್ಯಾಗ್ ಜಿಪ್ ತೆರೆದಿರುವುದು ಕಂಡು ಬಂದಿದ್ದು, ಬಂಗಾರದ ಒಡೆವೆಗಳ ಕವರ್ ಕಾಣಿಯಾಗಿತ್ತು. ಅಂದಾಜು 100 ಗ್ರಾಂ ತೂಕದ 4,00,000 ಮೌಲ್ಯದ ಚಿನ್ನಾಭರಣ, 3000 ಮೌಲ್ಯದ ವಾಚ್ ಕಳವಾಗಿತ್ತು. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ರೈಲ್ವೇ ನಿಲ್ದಾಣಕ್ಕೆ ಭೇಟಿ ನೀಡಿದ ಮಣಿಪಾಲ ಪೊಲೀಸರ ತಂಡ ರೈಲ್ವೇ ಪೊಲೀಸರ ಸಹಕಾರದೊಂದಿಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರೀಶೀಲಿಸಿ ಆರೋಪಿಗಳ ಮಾಹಿತಿ ಪಡೆದು ಅದರ ಆಧಾರದ ಮೇಲೆ ತಕ್ಷಣ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.