ರೈಲ್ವೆ ನಿಲ್ದಾಣ ಅಭಿವೃದ್ಧಿ ಸಾಕಾರ

04 Jaggu 4-Web
ಬೆಳಗಾವಿ ರೈಲ್ವೆ ನಿಲ್ದಾಣ ಕಾಮಗಾರಿಯನ್ನು ಸಚಿವ ಸುರೇಶ ಅಂಗಡಿ ಪರಿಶೀಲಿಸಿದರು. ರೇಲ್ ವಿಕಾಸ ನಿಗಮ ಮತ್ತು ರೈಲ್ವೆ ಇಲಾಖೆ ಸ್ಥಳೀಯ ಅಧಿಕಾರಿಗಳು ಇದ್ದರು.
Published on

ಬೆಳಗಾವಿ: ಬೆಳಗಾವಿ ನೂತನ ರೈಲ್ವೆ ನಿಲ್ದಾಣ ಕಾಮಗಾರಿಯನ್ನು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಗುರುವಾರ ವೀಕ್ಷಿಸಿ, ಮಾಹಿತಿ ಪಡೆದರು. ಬಳಿಕ ಅವರು ಮಾತನಾಡಿ, ಬೆಳಗಾವಿ ರೈಲ್ವೆ ನಿಲ್ದಾಣ ಪುರಾತನ ಇತಿಹಾಸ ಹೊಂದಿದೆ. ಈ ನಿಲ್ದಾಣ ಅಭಿವೃದ್ಧಿ ಹೊಂದಬೇಕು ಎಂಬುದು ಬಹುದಿನಗಳ ಕನಸಾಗಿತ್ತು. ಅದು ಈಗ ಸಾಕಾರಗೊಳ್ಳುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಹೆಚ್ಚುವರಿ ಪ್ಲಾಟ್‌ಫಾರ್ಮ್, ಆಧುನಿಕತೆಗೆ ತಕ್ಕಂತೆ ಹೋಟೆಲ್, ಮಾರುಕಟ್ಟೆ ಎಲ್ಲವೂ ಇಲ್ಲಿ ದೊರೆಯಲಿವೆ. ಮಹಾತ್ಮಾ ಗಾಂಧೀಜಿ ಅವರು ನಡೆದಾಡಿದ ಈ ನೆಲದ ಇತಿಹಾಸವನ್ನು ನೆನಪಿಸುವಂತೆ ರೈಲ್ವೆ ನಿಲ್ದಾಣ ಮುಂಭಾಗವನ್ನು ವಿನ್ಯಾಸಗೊಳಿಸಲು ತಜ್ಞ-ತಂತ್ರಜ್ಞರು ಹಾಗೂ ಯೋಜಕರು ರೂಪುರೇಷೆ ಸಿದ್ಧಪಡಿಸಿದ್ದಾರೆ. 2020ರ ನವೆಂಬರ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ, ಲಾಕ್‌ಡೌನ್‌ನಿಂದ ಕಾಮಗಾರಿ ವೇಗ ಪಡೆದಿಲ್ಲ ಎಂದು ತಿಳಿಸಿದರು.

ಸ್ಥಳೀಯ ಕಾರ್ಮಿಕರನ್ನು ಬಳಸಿಕೊಂಡು 2021ರ ಮಾರ್ಚ್ ಒಳಗೆ ಕೆಲಸ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬೆಳೆಯುತ್ತಿರುವ ಜನಸಂಖ್ಯೆ ಮತ್ತು ತಂತ್ರಜ್ಞಾನ ಗಮನದಲ್ಲಿಟ್ಟುಕೊಂಡು ರೈಲು ನಿಲ್ದಾಣ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ ಎಂದರು. ಬಳಿಕ ಕಾಮಗಾರಿ ಬಗ್ಗೆ ಅಧಿಕಾರಿಗಳಿಂದ ಸಚಿವ ಅಂಗಡಿ ಮಾಹಿತಿ ಪಡೆದರು. ರೇಲ್ ವಿಕಾಸ ನಿಗಮ ಹಿರಿಯ ಇಂಜಿನಿಯರ್ ವಿಜಯಕುಮಾರ ಪಾಟೀಲ, ಸ್ಟೇಷನ್ ಮಾಸ್ಟರ್ ಗಿರೀಶ, ರೈಲ್ವೆ ನಿಲ್ದಾಣ ವಿನ್ಯಾಸಕಾರ ಬಕುಲ್ ಜೋಶಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net