ರೈಲ್ವೆ ಸೇವೆ ಸುಧಾರಣೆ ನಿರೀಕ್ಷೆ

ಬೆಂಗಳೂರು ಸುತ್ತಲಿನ ಜಿಲ್ಲೆಗಳಿಗೆ ಉಪನಗರ ರೈಲ್ವೆ ಯೋಜನೆ ನಿರೀಕ್ಷೆ.
Railway Seve Sudharane Neerikshe
Published on


ಉಪನಗರ ಯೋಜನೆಗೆ ಬೇಕು ಅಂದಾಜು 15.767 ಕೋಟಿ ರೂ.

ವಿಜಯವಾಣಿ ಸುದ್ದಿಜಾಲ ಚಿಕ್ಕಬಳ್ಳಾಪುರ
ಉಪನಗರ ರೈಲ್ವೆ ಯೋಜನೆಯನ್ನು ಬೆಂಗಳೂರು ಸುತ್ತಲಿನ ಜಿಲ್ಲೆಗಳಿಗೆ ವಿಸ್ತರಿಸುವ ಸರ್ಕಾರದ ಚಿಂತನೆಯು ಈ ಭಾಗದಲ್ಲಿ ಪ್ರಯಾಣ ಸೇವೆಯ ಸುಧಾರಣೆ ನಿರೀಕ್ಷೆ ಹೆಚ್ಚಿಸಿದೆ.
ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರವನ್ನು ರಾಜ್ಯ ರಾಜಧಾನಿ ಬೆಂಗಳೂರಿಗೆ ಪರ್ಯಾಯವಾಗಿ ಅಭಿವೃದ್ಧಿಯ ಉಪನಗರವನ್ನಾಗಿ ಅಭಿವೃದ್ಧಿಪಡಿಸುವ ಮಾತುಗಳು ಮೊದಲಿನಿಂದಲೂ ಕೇಳಿ ಬರುತ್ತಿದೆ. ಇದರ ನಡುವೆ ಮೈಸೂರು, ಮಾಗಡಿ, ತುಮಕೂರು, ಚಿಕ್ಕಬಳ್ಳಾಪುರ ಮತ್ತು ಗೌರಿಬಿದನೂರು, ಕೋಲಾರ ಮತ್ತು ಹೊಸೂರು ಸೇರಿದಂತೆ ಬೆಂಗಳೂರಿನ ಸುತ್ತಲಿನ ಜಿಲ್ಲೆಗಳಿಗೆ ಉಪನಗರ ರೈಲ್ವೆ ಯೋಜನೆಯನ್ನು ವಿಸ್ತರಿಸುವುದಾಗಿ ಸಚಿವ ಎಂ.ಬಿ.ಪಾಟೀಲ್​ ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕಾರ್ಯ ಸಾಧ್ಯತಾ ವರದಿ ಸಿದ್ಧಪಡಿಸಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಯೋಜನೆಗೆ 15.767 ಕೋಟಿ ರೂ. ವೆಚ್ಚವಾಗುವುದರ ಬಗ್ಗೆ ಅಂದಾಜಿಸಲಾಗಿದೆ. ಕಳೆದ 2013ರ ಬಜೆಟ್​ನಲ್ಲಿಯೇ ಸ್ಪೆಷಲ್​ ಪರ್ಪಸ್​ ವೆಹಿಕಲ್​ ೂಷಿಸಿದ್ದು, 1 ಸಾವಿರ ಕೋಟಿ ರೂಪಾಯಿ ಒದಗಿಸಲಾಗಿದೆ. ಉಳಿದಂತೆ 7,438 ಕೋಟಿ ರೂಪಾಯಿ ಸಾಲ ಪಡೆಯುತ್ತಿದ್ದು, ಡಿಸೆಂಬರ್​ನಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗುತ್ತದೆ. ಒಂದು ವೇಳೆ ಯೋಜನೆಯು ಕಾರ್ಯರೂಪಕ್ಕೆ ಬಂದರೆ ಪ್ರಸ್ತುತ 148 ಕಿ.ಮೀನಿಂದ 452 ಕಿ.ಮೀಗೆ ವಿಸ್ತಾರಗೊಳ್ಳಲಿದೆ ಎಂದು ಹೇಳಲಾಗಿದೆ.

ರೈಲ್ವೆ ಸೌಕರ್ಯ ಹೆಚ್ಚಳ:
ಬ್ರಿಟಿಷರ ಕಾಲದಲ್ಲಿಯೇ ಮೀಟರ್​ ಗೇಜ್​ ಹಳಿ ನಿರ್ಮಾಣವಾಗಿ ಅವಿಭಜಿತ ಕೋಲಾರ ಜಿಲ್ಲೆಯು ರೈಲ್ವೆ ಸಂಚಾರ ಸೇವೆಯನ್ನು ಕಂಡಿದೆ. ಬೆಂಗಳೂರು ಮಾರ್ಗವಾಗಿ ಕೆಜಿಎಫ್​ಗೆ ರೈಲು ಸಂಚರಿಸುತ್ತಿತ್ತು. ಇದೀಗ ಹಳಿ ನ್ಯಾರೋಗೇಜ್​ ಮೇಲ್ದರ್ಜೆಗೇರಿದ್ದು, ಬಹುತೇಕ ರೈಲು ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗಿದೆ. ಬೆಂಗಳೂರು, ಚಿಕ್ಕಬಳ್ಳಾಪುರ, ಶಿಡ್ಲಟ್ಟ, ಚಿಂತಾಮಣಿ, ಶ್ರೀನಿವಾಸಪುರ ಮತ್ತು ಕೋಲಾರ ಮಾರ್ಗವಾಗಿ ಎರಡು ರೈಲುಗಳು ಸಂಚರಿಸುತ್ತಿವೆ. ಇದರ ನಡುವೆ ಇಲ್ಲಿನ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಮತ್ತಷ್ಟು ರೈಲುಗಳ ಸೇವೆಯನ್ನು ಒದಗಿಸಬೇಕು. ಇನ್ನೂ ದೇವನಹಳ್ಳಿಯವರೆಗೂ ಬಂದು ನಿಲ್ದಾಣದಲ್ಲಿಯೇ ಗಂಟೆಗಟ್ಟಲೇ ನಿಲ್ಲುವ ರೈಲುಗಳನ್ನು ಚಿಕ್ಕಬಳ್ಳಾಪುರಕ್ಕೆ ಬರುವಂತೆ ಮಾಡಿದರೆ ಇನ್ನು ಅನುಕೂಲವಾಗುತ್ತದೆ ಮಾತುಗಳು ಕೇಳಿ ಬರುತ್ತಿವೆ.

ಹೆಚ್ಚಿದ ಪ್ರಯಾಣಿಕರ ಒತ್ತಡ:
ಈ ಭಾಗದಿಂದ ಉನ್ನತ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿಗಳು, ಖಾಸಗಿ ಕಂಪನಿಗಳ ಕೆಲಸಕ್ಕೆ ನೌಕರರು ಸೇರಿದಂತೆ ನೂರಾರು ಪ್ರಯಾಣಿಕರು ದಿನನಿತ್ಯ ಬೆಂಗಳೂರಿಗೆ ಸಂಚರಿಸುತ್ತಿರುತ್ತಾರೆ. ರೈಲು ಪ್ರಯಾಣ ದರ ಕಡಿಮೆ. ಇದಕ್ಕಾಗಿ ಅನೇಕರು ಲಭ್ಯವಿರುವ ರೈಲ್ವೆ ಸೇವೆಯನ್ನು ಹೆಚ್ಚಿಗೆ ಬಳಸಿಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ಸಾರಿಗೆ ಸಂಸ್ಥೆಯ ಬಸ್​ಗಳ ಕೊರತೆ ಇದೆ. ಸಾಮಾನ್ಯವಾಗಿ ಚಿಕ್ಕಬಳ್ಳಾಪುರದಿಂದ ಬೆಂಗಳೂರು, ಕೋಲಾರ ಮತ್ತು ಚಿಂತಾಮಣಿಗೆ ತೆರಳುವ ಬಸ್​ಗಳು ಪ್ರಯಾಣಿಕರಿಂದ ತುಂಬಿ ಹೋಗಿರುತ್ತವೆ. ನೂಕು ನುಗ್ಗಲಾಟ, ಸೀಟುಗಳು ಸಿಗದೇ ವಾಹನದಲ್ಲಿ ನಿಂತುಕೊಂಡು ಸಂಚರಿಸುವಿಕೆ ಸೇರಿದಂತೆ ನಾನಾ ಸಮಸ್ಯೆಗಳನ್ನು ಅನುಭವಿಸಬೇಕಾಗಿದೆ. ಇನ್ನು ಶಕ್ತಿ ಯೋಜನೆ ಜಾರಿಯಾದ ಬಳಿಕ ಓವರ್​ ಲೋಡ್​ ಸಮಸ್ಯೆ, ಕೆಲಸದ ಒತ್ತಡದ ಬಗ್ಗೆ ಚಾಲಕರು ಮತ್ತು ನಿರ್ವಾಹಕರು ಅಳಲು ತೋಡಿಕೊಳ್ಳುತ್ತಿದ್ದಾರೆ. ಇದಕ್ಕೆ ರೈಲ್ವೆ ಉಪ ನಗರ ಯೋಜನೆ ಅನುಷ್ಠಾನವು ಪರಿಹಾರ ಸಿಗಬಹುದು.

ಚಿಕ್ಕಬಳ್ಳಾಪುರ ಮತ್ತು ಗೌರಿಬಿದನೂರು, ಚಿಕ್ಕಬಳ್ಳಾಪುರ ಮತ್ತು ಬಾಗೇಪಲ್ಲಿ ಮಾರ್ಗವಾಗಿ ರೈಲು ಹಳಿ ನಿರ್ಮಿಸಿ, ಹೆಚ್ಚಿನ ರೈಲು ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕು ಎಂಬುದು ಪ್ರಮುಖ ಬೇಡಿಕೆ. ಈ ನಿಟ್ಟಿನಲ್ಲಿ ಕೇಂದ್ರ ಸಚಿವರಾಗಿದ್ದ ಅವಧಿಯಲ್ಲಿ ಕೆ.ಎಚ್​.ಮುನಿಯಪ್ಪ ಮತ್ತು ಎಂ.ವೀರಪ್ಪ ಮೊಯ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಯೋಜನೆಯ ಅನುಷ್ಠಾನಕ್ಕೆ ಗಮನ ಸೆಳೆದಿದ್ದರು. ಇದಕ್ಕೆ ಸಮೀಕ್ಷೆ ಕೈಗೊಳ್ಳುವುದಕ್ಕೆ ಅನುಮೋದನೆ ನೀಡಿದ್ದು, ಇದರ ಕಾರ್ಯವು ಅರ್ಧಂರ್ಬಧ ನಡೆದಿದೆ. ಇದಕ್ಕೆ ಸಂಬಂಧಿಸಿದ ಪ್ರಗತಿಯ ಬಗ್ಗೆ ಮಾಹಿತಿಯೇ ಇಲ್ಲ. ಸಂಸದ ಬಿ.ಎನ್​.ಬಚ್ಚೇಗೌಡ ಈ ವಿಷಯವಾಗಿ ಗಮನ ಸೆಳೆಯುವಲ್ಲಿ ವಿಫಲರಾಗಿದ್ದಾರೆ ಎಂಬ ಆಕ್ರೋಶ ಇಲ್ಲಿನ ಜನರಲ್ಲಿದೆ. ಇತ್ತೀಚೆಗೆ ಚಿಕ್ಕಬಳ್ಳಾಪುರ ಮತ್ತು ಗೌರಿಬಿದನೂರು ರೈಲು ಹಳಿ ನಿರ್ಮಾಣಕ್ಕಾಗಿ ಯೋಜನೆ ಅನುಷ್ಠಾನ, ಅನುದಾನ ಬಿಡುಗಡೆಯು ಕೇವಲ ದಾಖಲೆಗಳಲ್ಲಿ ಮಾತ್ರ ಪ್ರಸ್ತಾಪವಾಗಿ, ಗೌಣವಾಗಿದೆ. ಇನ್ನು ಉಪ ನಗರ ಯೋಜನೆಯಡಿ ಚಿಕ್ಕಬಳ್ಳಾಪುರ ಮತ್ತು ಗೌರಿಬಿದನೂರಿಗೆ ವಿಶೇಷ ಆದ್ಯತೆ ನೀಡಿರುವ ಸಂದರ್ಭದಲ್ಲಿ ಬಹುದಿನಗಳ ಈ ಬೇಡಿಕೆಯು ಈಡೇರುವ ನಿರೀಕ್ಷೆ ಇದೆ ಎಂದೇಳಲಾಗುತ್ತಿದೆ.


ಉಪನಗರ ರೈಲ್ವೆ ಯೋಜನೆಯನ್ನು ಬೆಂಗಳೂರಿನ ಸುತ್ತಲಿನ ಜಿಲ್ಲೆಗಳಿಗೆ ವಿಸ್ತರಿಸಲಾಗುತ್ತದೆ, ಇದರಲ್ಲಿ ಚಿಕ್ಕಬಳ್ಳಾಪುರ ಮತ್ತು ಗೌರಿಬಿದನೂರು ಪ್ರದೇಶಕ್ಕೂ ಆದ್ಯತೆ ನೀಡಲಾಗಿದೆ ಎಂಬುದು ಖುಷಿಯ ವಿಚಾರ.

ರಾಜಶೇಖರ್​, ರೈಲ್ವೆ ಪ್ರಯಾಣಿಕ, ಚಿಕ್ಕಬಳ್ಳಾಪುರ

ದಶಕಗಳಿಂದಲೂ ಈ ಭಾಗದಲ್ಲಿನ ರೈಲ್ವೆ ಅಭಿವೃದ್ಧಿಯ ಯೋಜನೆಗಳ ಚರ್ಚೆಯಾಗುತ್ತಿದೆ. ಆದರೆ, ಇದರ ಅನುಷ್ಠಾನವು ಮಾತ್ರ ಆಮೆಗತಿಯಲ್ಲಿದೆ. ಜನರಿಗೆ ಹೆಚ್ಚಿನ ಸೌಕರ್ಯಗಳು ತ್ವರಿತವಾಗಿ ಸಿಗುವ ನಿಟ್ಟಿನಲ್ಲಿ ಸರ್ಕಾರಗಳು ಕಾಯೋನ್ಮುಖರಾಗಬೇಕು.

ಶಿವಕುಮಾರ್​, ರೈಲ್ವೆ ಪ್ರಯಾಣಿಕ, ಚಿಕ್ಕಬಳ್ಳಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net