

ಹುಬ್ಬಳ್ಳಿ : ರೈಲ್ವೆ ನೇಮಕಾತಿ ಮಂಡಳಿ (ಆರ್ಆರ್ಬಿ) ನಡೆಸುವ ಪರೀಕ್ಷಾ ಕೇಂದ್ರಗಳಲ್ಲಿ ಲೋಹದ ವಸ್ತುಗಳು, ಧಾರ್ವಿುಕ ಚಿಹ್ನೆಗಳು, ಬಳೆಗಳು, ಆಭರಣಗಳು, ಮಂಗಳ ಸೂತ್ರ, ಕಡಗಗಳನ್ನು ಧರಿಸಿರುವ ಅಭ್ಯರ್ಥಿಗಳನ್ನು ಅವರ ಕರೆ ಪತ್ರದಲ್ಲಿ ಸೂಕ್ತವಾದ ಅನುಮೋದನೆಯೊಂದಿಗೆ ಪರೀಕ್ಷಾ ಹಾಲ್ನೊಳಗೆ ಪ್ರವೇಶಿಸಲು ಸಮ್ಮತಿ ಸೂಚಿಸಲಾಗಿದೆ.
‘ರೈಲ್ವೆ ಪರೀಕ್ಷೆಯಲ್ಲೂ ತಾಳಿ, ಬಳೆ ಬ್ಯಾನ್ !’ ಶೀರ್ಷಿಕೆಯಡಿ ಕನ್ನಡದ ನಂ. 1 ದಿನಪತ್ರಿಕೆ ‘ವಿಜಯವಾಣಿ’ ಸೋಮವಾರ ಪ್ರಕಟಿಸಿದ ವಿಶೇಷ ವರದಿಗೆ ಪ್ರತಿಕ್ರಿಯೆ ನೀಡಿರುವ ನೈಋತ್ಯ ರೈಲ್ವೆ ವಲಯ, ರೈಲ್ವೆ ನೇಮಕಾತಿ ಮಂಡಳಿ, ಪರೀಕ್ಷಾ ಕೇಂದ್ರಗಳಲ್ಲಿ ನಿಷಿದ್ಧ ವಸ್ತುಗಳಿಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದೆ.
ಈ ಕುರಿತು ಪ್ರಕಟಣೆ ನೀಡಿರುವ ನೈಋತ್ಯ ರೈಲ್ವೆ ವಲಯದ ಸಿಪಿಆರ್ಒ ಡಾ. ಮಂಜುನಾಥ ಕನಮಡಿ, ಮಂಗಳಸೂತ್ರ, ಕಡಗ ಮತ್ತಿತರ ವಸ್ತುಗಳನ್ನು ಧರಿಸಿ ಬರುವ ಅಭ್ಯರ್ಥಿಗಳ ಮೇಲೆ ಮೇಲ್ವಿಚಾರಕರು ಹೆಚ್ಚಿನ ನಿಗಾ ಇಡಲಿದ್ದಾರೆ ಎಂದು ತಿಳಿಸಿದ್ದಾರೆ.
ರೈಲ್ವೆ ನೇಮಕಾತಿ ಮಂಡಳಿ (ಆರ್ಆರ್ಬಿ) ನಡೆಸುವ ಪರೀಕ್ಷಾ ಕೇಂದ್ರಗಳಲ್ಲಿ ಕೆಲವು ವಸ್ತುಗಳನ್ನು ಕೊಂಡೊಯ್ಯುವುದನ್ನು ನಿರ್ಬಂಧಿಸಲಾಗಿದೆ. ಆದರೆ, ಯಾವುದೇ ಧಾರ್ವಿುಕ ಭಾವನೆಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ, ಸಕ್ಷಮ ಪ್ರಾಧಿಕಾರವು ಇದೀಗ ಕರೆ ಪತ್ರದಲ್ಲಿ ನೀಡಲಾದ ಸೂಚನೆಗಳಲ್ಲಿ ಮಾರ್ಪಾಡುಗಳನ್ನು ಮಾಡಲು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.
ಮೊಬೈಲ್ ಫೋನ್ಗಳು, ಪೇಜರ್, ವಾಚ್ಗಳು, ಇಯರ್ ಫೋನ್, ಬ್ಲೂಟೂತ್ ಸಾಧನಗಳು, ಮೈಕ್ರೊಫೋನ್, ಹೆಲ್ತ್ ಬ್ಯಾಂಡ್ಗಳು, ಕ್ಯಾಲ್ಕುಲೇಟರ್ಗಳು, ಪುಸ್ತಕ, ಪೆನ್, ಪೇಪರ್, ಪೆನ್ಸಿಲ್, ಇರೇಸರ್, ಪೌಚ್, ಸ್ಕೇಲ್, ರೈಟಿಂಗ್ಪ್ಯಾಡ್, ಹ್ಯಾಂಡ್ ಬ್ಯಾಗ್, ಕ್ಯಾಪ್, ಪರ್ಸ್, ಕ್ಯಾಮರಾ, ನೀರಿನ ಬಾಟಲ್, ಪ್ಯಾಕ್ ಮಾಡಿದ ಅಥವಾ ತೆರೆದ ಆಹಾರ ಪದಾರ್ಥಗಳು ಮುಂತಾದ ನಿಷಿದ್ಧ ವಸ್ತುಗಳು, ಇಲೆಕ್ಟ್ರಾನಿಕ್ ಗ್ಯಾಜೆಟ್ಗಳನ್ನು ಪರೀಕ್ಷಾ ಕೇಂದ್ರದೊಳಗೆ ಅನುಮತಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಪರೀಕ್ಷಾ ಕೇಂದ್ರದೊಳಗೆ ಕೇವಲ ಇ -ಕರೆ ಪತ್ರವನ್ನು ಮಾತ್ರ ಅನುಮತಿಸಲಾಗುವುದು. ಅಭ್ಯರ್ಥಿಗಳು ಯಾವುದೇ ಪೆನ್, ಪೆನ್ಸಿಲ್ ಅನ್ನು ಪರೀಕ್ಷಾ ಕೇಂದ್ರದೊಳಗೆ ಕೊಂಡೊಯ್ಯಬಾರದು. ಪರೀಕ್ಷೆಯ ಸಮಯದಲ್ಲಿ ಅಭ್ಯರ್ಥಿಗಳಿಗೆ ಪೆನ್ ಅನ್ನು ಒದಗಿಸಲಾಗುವುದು. ಅಭ್ಯರ್ಥಿಗಳು ತಮ್ಮ ಕೈ, ಕಾಲುಗಳಿಗೆ ಮೆಹಂದಿ ಹಾಕಿಕೊಳ್ಳದಂತೆ ಸೂಚಿಸಲಾಗಿದೆ. ಏಕೆಂದರೆ ಇದು ಬಯೋಮೆಟ್ರಿಕ್ಸ್ ಸೆರೆಹಿಡಿಯುವಿಕೆಗೆ ಅಡ್ಡಿಯುಂಟು ಮಾಡುತ್ತದೆ ಎಂದು ಹೇಳಿದ್ದಾರೆ.