

ಪುತ್ತೂರು: ಕಾಞಂಗಾಡ್‌ನಿಂದ ಕಾಣಿಯೂರುಗೆ ಸಂಪರ್ಕ ಕಲ್ಪಿಸುವ ರೈಲ್ವೆ ಮಾರ್ಗ ಯೋಜನೆ ಅಭಿವೃದ್ಧಿ ಕಾಣದೆ ನನೆಗುದಿಗೆ ಬಿದ್ದಿದ್ದು, ಕರ್ನಾಟಕ ಸರ್ಕಾರ ಜತೆ ಮಾತುಕತೆ ನಡೆಸುವ ಉದ್ದೇಶದಿಂದ ರೈಲ್ವೆ ಹೋರಾಟ ಸಮಿತಿ ನಿಯೋಗವೊಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರನ್ನು ಭೇಟಿಯಾಗಿದೆ.
೨೦೦೮ರಲ್ಲಿ ಕಾಞಂಗಾಡ್- ಕಾಣಿಯೂರು ರೈಲ್ವೆ ಹೊಸ ಮಾರ್ಗಕ್ಕೆ ಕೇಂದ್ರ ರೈಲ್ವೆ ಇಲಾಖೆ ಅನುಮೋದನೆ ನೀಡಿದೆ. ಕಾಮಗಾರಿಗೆ ಡಿಪಿಆರ್ ಸಿದ್ಧಪಡಿಸಿ ಆ ಬಳಿಕ ಕೇಂದ್ರ ಸರ್ಕಾರ ೧೩೫೦ ಕೋಟಿ ರೂ. ಯೋಜನೆ ಸಿದ್ಧಪಡಿಸಬೇಕಿದೆ. ಇದರಲ್ಲಿ ೬೫೦ ಕೋಟಿ ರೂ. ಕೇರಳ ಮತ್ತು ಕರ್ನಾಟಕ ೫೦:೫೦ ಅನುಪಾತದಲ್ಲಿ ನೀಡಬೇಕಿದೆ.
ಕೇರಳ ಸರ್ಕಾರ ಈಗಾಗಲೇ ೩೨೦ ಕೋಟಿ ರೂ. ಅನುದಾನ ನೀಡಲು ಒಪ್ಪಿದ್ದು, ಕರ್ನಾಟಕ ಸರ್ಕಾರದಿಂದ ಸಿಗಬೇಕಾದ ೩೨೫ ಕೋಟಿ ರೂ. ಅನುದಾನದ ಬಗ್ಗೆ ಇನ್ನೂ ಮಾತುಕತೆ ನಡೆದಿಲ್ಲ. ಕರ್ನಾಟಕ ಸರ್ಕಾರದ ಮಾತುಕತೆ ಮುಂದಿನ ವಾರ ನಡೆಯಲಿದ್ದು, ರೈಲ್ವೆ ಹೋರಾಟ ಸಮಿತಿ ಮತ್ತು ಶಾಸಕ ಅಶೋಕ್ ರೈ ಜಂಟಿಯಾಗಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗುವ ಬೇಡಿಕೆಯನ್ನು ಇಟ್ಟಿದ್ದಾರೆ.
ಕಾಞಂಗಾಡ್- ಮೀನೋತ್- ಕೊಟ್ಟೋಡಿ-ಬಳತ್ತೋಡು- ಪಾಣತ್ತೂರು ಮೂಲಕ ಕರ್ನಾಟಕದ ಕಲ್ಲಪಳ್ಳಿ- ಸುಳ್ಯ-ಬೆಳ್ಳಾರೆ- ಕಾಣಿಯೂರುಗೆ ಈ ರೈಲ್ವೇ ಮಾರ್ಗ ಸಂಪರ್ಕ ಕಲ್ಪಿಸಲಿದೆ. ಸುಮಾರು ೯೧ ಕಿ.ಮೀ ಉದ್ದವಿದ್ದು, ಕೇಂದ್ರ ಸರ್ಕಾರ, ಕೇರಳ ಮತ್ತು ಕರ್ನಾಟಕ ಸರ್ಕಾರ ಜಂಟಿಯಾಗಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಿದೆ. ನಿಯೋಗದಲ್ಲಿ ಹೋರಾಟ ಸಮಿತಿಯ ಬೆಟ್ಟ ಜಯರಾಂ, ವಕೀಲ ಎಂ.ಸಿ ಜೋಶ್, ಎ.ಹಮೀದ್ ಹಾಜಿ, ಸೂರ್ಯನಾರಾಯಣ ಭಟ್, ಕುಂಞಿ ಕಣ್ಣನ್, ಮೊಹಮ್ಮದ್ ಉಪಸ್ಥಿತರಿದ್ದರು.
ಕಾಞಂಗಾಡ್- ಕಾಣಿಯೂರು ಯೋಜನೆಗೆ ೨೦೧೫ರಲ್ಲಿ ಕೇಂದ್ರ ಅನುಮತಿಯನ್ನು ನೀಡಿದೆ. ಆದರೆ ಆ ಬಳಿಕ ಸರ್ವೆ ನಡೆಸಿದೆ ಹೊರತು ಡಿಪಿಆರ್ ಸಿದ್ಧಪಡಿಸಿಲ್ಲ. ಕೇರಳ ಮತ್ತು ಕರ್ನಾಟಕದ ಮೂಲಕ ಹಾದು ಹೋಗುವ ಈ ರೈಲು ಮಾರ್ಗಕ್ಕೆ ಕೇಂದ್ರದ ಜತೆ ಎರಡು ಸರ್ಕಾರಗಳು ಕೈಜೋಡಿಸಬೇಕಿದೆ. ಈ ಯೋಜನೆ ಜಾರಿಯಾದಲ್ಲಿ ಕೇರಳ ಮತ್ತು ಕರ್ನಾಟಕಕ್ಕೆ ಕೊಂಡಿಯಾಗಿ ಕೆಲಸ ಮಾಡಲಿದೆ. ಸುಬ್ರಹ್ಮಣ್ಯ ಮತ್ತು ಬೆಂಗಳೂರಿಗೆ ತೆರಳುವ ಪ್ರಯಾಣಿಕರಿಗೆ ಇದು ಪ್ರಯೋಜನವಾಗಲಿದೆ.
| ಅಶೋಕ್ ಕುಮಾರ್ ರೈ, ಶಾಸಕರು ಪುತ್ತೂರು