ಸೆಂಟ್ರಲ್ ರೈಲು ನಿಲ್ದಾಣಕ್ಕೆ ಇನ್ನೆರಡು ಆಟೋಮೇಟೆಡ್ ಮೆಷಿನ್ ಸಲಹಾ ಸಮಿತಿ ಸಭೆಯಲ್ಲಿ ಅಧಿಕಾರಿಗಳ ಭರವಸೆ

mng--17 Sep Railway Meeting
Published on

ಮಂಗಳೂರು: ಮಂಗಳೂರಿನ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಟಿಕೆಟ್ ನೀಡಲು ಅನುಕೂಲವಾಗುವಂತೆ ವಾರದೊಳಗೆ ಇನ್ನೆರಡು ಆಟೊಮೇಟೆಡ್ ಮೆಷಿನ್ ಅಳವಡಿಕೆಯಾಗಲಿದೆ.


ಪಾಲ್ಘಾಟ್‌ನಲ್ಲಿ ಶುಕ್ರವಾರ ನಡೆದ ದಕ್ಷಿಣ ರೈಲ್ವೆ ಪಾಲ್ಘಾಟ್ ವಿಭಾಗದ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸಭೆಯಲ್ಲಿ ಈ ಭರವಸೆ ದೊರೆತಿದೆ. ಈ ಕುರಿತಂತೆ ರೈಲ್ವೆ ಸಲಹಾ ಸಮಿತಿ ಸದಸ್ಯ ಮಂಗಳೂರಿನ ಹನುಮಂತ ಕಾಮತ್ ಅವರು ವಿಷಯ ಪ್ರಸ್ತಾವಿಸಿದ್ದರು. ಈಗ ಒಂದೇ ಆಟೊಮೇಟೆಡ್ ಮೆಷಿನ್ ಇದ್ದು, ಇದರಿಂದಾಗಿ ತಕ್ಷಣಕ್ಕೆ ಟಿಕೆಟ್ ಪಡೆಯಲು ಸಾಧ್ಯವಾಗುತ್ತಿಲ್ಲ ಎಂಬ ಅಂಶವನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಇದಕ್ಕೆ ಉತ್ತರಿಸಿದ ಪಾಲ್ಘಾಡ್ ವಿಭಾಗೀಯ ರೈಲ್ವೆ ಪ್ರಬಂಧಕ ತ್ರಿಲೋಕ್ ಕೊಠಾರಿ, ವಾರದೊಳಗೆ ರೈಲು ನಿಲ್ದಾಣದಲ್ಲಿ ಮತ್ತೆರಡು ಯಂತ್ರ ಅಳವಡಿಸಲಾಗುವುದು ಎಂದು ತಿಳಿಸಿದ್ದಾರೆ.


ಈ ಹಿಂದೆ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಮೂರು ಆಟೊಮೇಟೆಡ್ ಮೆಷಿನ್‌ಗಳು ಕಾರ್ಯಾಚರಿಸುತ್ತಿತ್ತು. ಈಗ ಕೇವಲ ಒಂದು ಮೆಷಿನ್ ಮಾತ್ರ ಇದೆ. ಜನದಟ್ಟಣೆ ಅವಧಿಯಲ್ಲಿ ಅದನ್ನು ನಿರ್ವಹಿಸಲು ಓರ್ವರಿಗೆ ವಹಿಸಲಾಗಿದೆ. ಮೆಷಿನ್ ಒಂದೇ ಇರುವುದರಿಂದ ಹಾಗೂ ಜನರೆಲ್ಲರೂ ಸೆಂಟ್ರಲ್ ಸ್ಟೇಶನ್ ಕಟ್ಟಡಕ್ಕೇ ಟಿಕೆಟ್‌ಗೆ ಆಗಮಿಸುವುದರಿಂದ ಹೆಚ್ಚಿನ ಸಮಯದಲ್ಲಿ ಟಿಕೆಟ್‌ಗೆ ಸರತಿ ಸಾಲಿನಲ್ಲಿ ಕಾಯಬೇಕಾಗುತ್ತದೆ ಎಂಬ ವಿಚಾರವನ್ನು ಹನುಮಂತ ಕಾಮತ್ ಪ್ರಸ್ತಾಪಿಸಿದ್ದರು.
ಮಂಗಳೂರು- ಕಬಕ-ಪುತ್ತೂರು ರೈಲ್‌ನ್ನು ಸುಬ್ರಹಣ್ಯದವರೆಗೆ ವಿಸ್ತರಿಸುವುದು, ಮಂಗಳೂರು -ಮಡಂಗಾವ್ ಇಂಟರ್‌ಸಿಟಿ ರೈಲು ಸಂಚಾರ ಮರು ಆರಂಭ ಸೇರಿದಂತೆ ವಿವಿಧ ಬೇಡಿಕೆಗಳನ್ನು ಸಲಹಾ ಸಮಿತಿ ಸಭೆಯಲ್ಲಿ ಹನುಮಂತ ಕಾಮತ್ ಪ್ರಸ್ತಾಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net