

ವಿಜಯವಾಣಿ ಸುದ್ದಿಜಾಲ ಮಂಗಳೂರು
ಮಂಗಳೂರು ಸೆಂಟ್ರಲ್ ಮೆಕ್ಯಾನಿಕಲ್ ಡಿಪೋದಲ್ಲಿ ಕಾರ್ಮಿಕರಿಗೆ ಮಾನಸಿಕ ಒತ್ತಡ ಉಂಟು ಮಾಡುತ್ತಿರುವ ಡ್ಯೂಟಿ ರೋಸ್ಟರ್ ಪರಿಷ್ಕರಣೆ ಮಾಡಬೇಕು, ಮಲಯಾಳಿಗಳು ಮತ್ತು ಇತರ ಭಾಷೆಯನ್ನು ಮಾತನಾಡುವ ನೌಕರರ ನಡುವೆ ತಾರತಮ್ಯ ನೀತಿ ಅನುಸರಿಸಬಾರದು ಸಹಿತ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ರೈಲ್ವೆ ಕಾರ್ಮಿಕರ ಸಂಘ (ಬಿಎಂಎಸ್) ವತಿಯಿಂದ ಸೋಮವಾರ ನಗರದ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣ ಮುಂಭಾಗ ರೈಲ್ವೆ ಕಾರ್ಮಿಕರು ಪ್ರತಿಭಟನೆ ನಡೆಸಿದರು.
ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದ ಬಿಎಂಎಸ್ ಕೇರಳ ರಾಜ್ಯ ಉಪಾಧ್ಯಕ್ಷ ಮುರಳೀಧರನ್ ಅವರು, ಇಲಾಖೆಯಲ್ಲಿ ಮಂಜೂರಾದ ಹುದ್ದೆಗಳನ್ನು ಭರ್ತಿ ಮಾಡದೆ ಕಾರ್ಮಿಕರ ಮೇಲೆ ಕೆಲಸದ ಹೊರೆ ಹೇರುವ ಪರಿಪಾಠವನ್ನು ಕೊನೆಗಾಣಿಸುವಂತೆ ಒತ್ತಾಯಿಸಿದರು.
ಕಾರ್ಮಿಕರು ಅನಾರೋಗ್ಯಕ್ಕೆ ಒಳಗಾದಾಗ ಬೆದರಿಕೆ ಹಾಕುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಅರ್ಹ ರಜಾ ದಿನಗಳನ್ನು ಸಹ ನಿರಾಕರಿಸುವ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸುವುದಾಗಿ ಹೇಳಿದರು.
ಸಣ್ಣಪುಟ್ಟ ಅಚಾತುರ್ಯ ತಪ್ಪುಗಳಿಗೂ ಕಠಿಣ ಶಿಕ್ಷಾರ್ಹ ಕ್ರಮ ಕೈಗೊಳ್ಳುವ ಪ್ರವೃತ್ತಿಯನ್ನು ಕೆಲವು ಅಧಿಕಾರಿಗಳು ನಡೆಸುತ್ತಿದ್ದಾರೆ. ಇಂತಹ ಕಾರ್ಮಿಕ ವಿರೋಧಿ ನೀತಿಯನ್ನು ಕೈಬಿಡಬೇಕು. ವೇತನಕ್ಕೆ ಸಂಬಂಧಿಸಿದಂತೆ ಸಿಬ್ಬಂದಿ ದೂರುಗಳು ಹೆಚ್ಚಿವೆ. ಭತ್ಯೆಗಳನ್ನು ಸಕಾಲದಲ್ಲಿ ಪಾವತಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಿ ಎಂದು ಅವರು ಒತ್ತಾಯಿಸಿದರು.
ಬಿಎಂಎಸ್ ಕರ್ನಾಟಕದ ಮಾಜಿ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಪ್ರತಿಭಟನೆಯನ್ನು ಉದ್ಘಾಟಿಸದರು. ದಕ್ಷಿಣ ರೈಲ್ವೆ ಕಾರ್ಮಿಕ ಸಂಘ (ಡಿಆರ್‌ಕೆಎಸ್) ವಿಭಾಗೀಯ ಅಧ್ಯಕ್ಷ ಶ್ಯಾಮಲನ್ ಅಧ್ಯಕ್ಷತೆ ವಹಿಸಿದ್ದರು.
ಬಿಎಂಎಸ್ ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಬಂಬ್ರಾಣ, ಜಂಟಿ ಕಾರ್ಯದರ್ಶಿ ಹರೀಶ್ ಕುದ್ರೆಪ್ಪಾಡಿ ಮುಂತಾದವರು ಉಪಸ್ಥಿತರಿದ್ದರು.
ಡಿಆರ್‌ಕೆಎಸ್ ವಿಭಾಗೀಯ ಪ್ರಧಾನ ಕಾರ್ಯದರ್ಶಿ ಲಿನೇಶ್ ಸ್ವಾಗತಿಸಿದರು. ವಿಭಾಗೀಯ ಉಪಾಧ್ಯಕ್ಷ ತುಳಸಿದಾಸ್ ವಂದಿಸಿದರು.