

ನಂಜನಗೂಡು: ಮೈಸೂರು-ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿಯ ನಂಜನಗೂಡು ನಗರದ ಬಳಿ ನಿರ್ಮಾಣವಾಗಿರುವ ರೈಲ್ವೆ ಮೇಲ್ಸೇತುವೆಗೆ ಮಾಜಿ ಸಂಸದ ದಿ.ವಿ.ಶ್ರೀನಿವಾಸಪ್ರಸಾದ್ ಅವರ ಹೆಸರು ನಾಮಕರಣ ಮಾಡಬೇಕು ಎಂದು ಬಿಜೆಪಿ ಕಾರ್ಯಕರ್ತರು ಹಾಗೂ ಶ್ರೀನಿವಾಸಪ್ರಸಾದ್ ಅವರ ಅಭಿಮಾನಿಗಳು ಒತ್ತಾಯಿಸಿದರು.
ಆ.6ಕ್ಕೆ ದಿ.ವಿ. ಶ್ರೀನಿವಾಸಪ್ರಸಾದ್ ಅವರ ಜನ್ಮ ದಿನಾಚರಣೆ ಸಂಬಂಧ ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಿ.ಚಿಕ್ಕರಂಗ ನಾಯಕ ಮಾತನಾಡಿ, ಶ್ರೀನಿವಾಸಪ್ರಸಾದ್ ಅವರು ಸಾಮಾಜಿಕ ನ್ಯಾಯ, ರಾಜಕೀಯ ಬದ್ಧತೆ, ಅವರ ಸಾಮಾಜಿಕ ಕಳಕಳಿ, ಆದರ್ಶಗಳು ಇಂದಿಗೂ ಜೀವಂತವಾಗಿವೆ. ನಾವೆಲ್ಲರೂ ಅವರ ಮಾರ್ಗದಲ್ಲಿ ಸಾಗಬೇಕು. ಪ್ರಸಾದ್ ಅವರ ಹುಟ್ಟುಹಬ್ಬವನ್ನು ಪಕ್ಷಾತೀತವಾಗಿ ಆಚರಣೆ ಮಾಡಲು ನಿರ್ಧಾರ ಮಾಡಿದ್ದೇವೆ. ಪ್ರತಿಯೊಬ್ಬರ ಅಭಿಪ್ರಾಯಗಳನ್ನು ತೆಗೆದುಕೊಂಡು ಮಾಜಿ ಶಾಸಕ ಬಿ.ಹರ್ಷವರ್ಧನ್ ಅವರ ಜತೆ ಚರ್ಚೆ ಮಾಡುತ್ತೇವೆ. ಅವರ ಆಸೆಯಂತೆ ಅಂಬೇಡ್ಕರ್ ಭವನದಲ್ಲಿ ಆಚರಣೆ ಮಾಡಲು ಸಿದ್ಧತೆ ನಡೆಸುತ್ತೇವೆ. ಈ ಕಾರ್ಯಕ್ರಮಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಮಾಜಿ ಸಚಿವ ಬಿ.ಶ್ರೀರಾಮುಲು ಅವರನ್ನು ಆಹ್ವಾನಿಸಲಾಗುವುದು ಎಂದು ಹೇಳಿದರು.
ಬಳಿಕ ಬಿಜೆಪಿ ಮಂಡಲದ ಅಧ್ಯಕ್ಷ ಸಿದ್ದರಾಜು ಮಾತನಾಡಿ, ವಿ. ಶ್ರೀನಿವಾಸಪ್ರಸಾದ್ ಅವರ ಜನ್ಮದಿನ ಪ್ರಯುಕ್ತ ರಕ್ತದಾನ ಶಿಬಿರ, ಶಾಲಾ ಮಕ್ಕಳಿಗೆ ಕಲಿಕಾ ಸಾಮಗ್ರಿಗಳ ವಿತರಣೆ, ಹಾಡಿ ಜನರಿಗೆ ವಿವಿಧ ಭಾಗಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಲು ನಿರ್ಧರಿಸಿದ್ದೇವೆ ಎಂದರು.
ರೈಲ್ವೆ ಮೇಲ್ಸೇತುವೆಗೆ ಶ್ರೀನಿವಾಸಪ್ರಸಾದ್ ಅವರ ಹೆಸರಿಡುವಂತೆ ಈಗಾಗಲೇ ನಗರಸಭೆಗೆ ಮನವಿ ಮಾಡಿದ್ದೇವೆ. ನಗರಸಭೆಯಲ್ಲಿ ಆಡಳಿತ ಪಕ್ಷದ ಕೋರಂ ಇರುವುದರಿಂದ ದಿ.ಆರ್.ಧ್ರುವ ನಾರಾಯಣ್ ಅವರ ಹೆಸರಿಡಲು ಮುಂದಾಗಿದ್ದಾರೆ. ಇದಕ್ಕೆ ನಾವು ತಕರಾರು ಸಲ್ಲಿಸಿದ್ದೇವೆ. ಪ್ರಸಾದ್ ಅವರ ಹೆಸರು ಕೈ ಬಿಟ್ಟು ಬೇರೆ ಹೆಸರು ಇಟ್ಟರೆ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ಕಾರ್ಯಕರ್ತರು ಮತ್ತು ಶ್ರೀನಿವಾಸಪ್ರಸಾದ್ ಅವರ ಅಭಿಮಾನಿಗಳು ನಂಜನಗೂಡಿನ ನಗರಸಭೆಗೆ ತೆರಳಿ ಶ್ರೀನಿವಾಸಪ್ರಸಾದ್ ಅವರ ಹೆಸರನ್ನು ರೈಲ್ವೆ ಮೇಲ್ಸೇತುವೆಗೆ ನಾಮಕರಣ ಮಾಡುವಂತೆ ನಗರಸಭಾ ಅಧ್ಯಕ್ಷ ಶ್ರೀಕಂಠ ಮತ್ತು ನಗರಸಭಾ ಆಯುಕ್ತ ವಿಜಯ್ ಅವರಿಗೆ ಮನವಿ ಸಲ್ಲಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಿ. ಚಿಕ್ಕರಂಗನಾಯಕ, ನಗರಸಭಾ ಸದಸ್ಯರಾದ ಮಹದೇವಪ್ರಸಾದ್, ಮಹೇಶ್ ಅತ್ತಿಖಾನೆ, ಬಿಜೆಪಿ ಮಂಡಲ ಅಧ್ಯಕ್ಷ ಕೆಂಡಗಣ್ಣಪ್ಪ, ಬಿಜೆಪಿ ಪಟ್ಟಣ ಅಧ್ಯಕ್ಷ ಸಿದ್ದರಾಜು, ಬಾಲಚಂದ್ರು, ಶ್ರೀನಿವಾಸ ರೆಡ್ಡಿ, ರಾಜು, ಮಂಜು, ಮಾಜಿ ತಾ.ಪಂ ಸದಸ್ಯ ಬದನವಾಳು ರಾಮು, ಪರಶಿವಮೂರ್ತಿ, ಕೃಷ್ಣಪ್ಪ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಇದ್ದರು.