

ಉಡುಪಿ: ಬೈಂದೂರು ತಾಲೂಕಿನ ಶಿರೂರು ಗ್ರಾಮದಲ್ಲಿರುವ ಎಲ್ಸಿ ಗೇಟ್ ನಂ.71 ರಲ್ಲಿ ರೈಲುಗಳು ಸಂಚರಿಸುವ ಸಮಯದಲ್ಲಿ ಗೇಟ್ ಮುಚ್ಚುವುದರಿಂದ ಸಾರ್ವಜನಿಕರಿಗೆ ಸಂಚಾರಕ್ಕೆ ಅಡಚಣೆಯಾಗುತ್ತಿದ್ದು, ಹೀಗಾಗಿ ಇಲಾಖೆಯಿಂದ ನಿರ್ಮಿಸಿದ ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಹಾಗೂ ಪ್ರಸ್ತುತ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಆದೇಶ ಹೊರಡಿಸಿದ್ದಾರೆ.
ಬೈಂದೂರು ತಾಲೂಕಿನ ಶಿರೂರು ಗ್ರಾಮದ ಗೇಟ್ 71ರ ರಸ್ತೆ ಮೂಲಕ ಹಾದುಹೋಗುವ ಎಲ್ಲಾ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೆೇಧಿಸಲಾಗಿದೆ. ಇದರ ಬದಲೀ ಮಾರ್ಗವಾಗಿ ಎಲ್ಲಾ ವಾಹನಗಳು ಶಿರೂರು ಟೋಲ್ ಗೇಟ್ ನಿಂದ ಸುಮಾರು 500 ಮೀಟರ್ ಹಿಂದಕ್ಕೆ ದುರ್ಗಾಂಬಿಕಾ ಹಾಲ್ ಹಾಗೂ ಶಿರೂರು ಕೆರೆಕಟ್ಟೆ ಬಸ್ ನಿಲ್ದಾಣದ ಬಳಿ ಇರುವ ರಸ್ತೆಯಿಂದ ರೈಲ್ವೇ ಓವರ್ ಬ್ರಿಡ್ಜ್ ಮೂಲಕ ಗೇಟ್ ನಂ. 71 ರ ಪಕ್ಕದ ಪಶ್ಚಿಮ ದಿಕ್ಕಿನಲ್ಲಿ ರೇಲ್ವೆ ಇಲಾಖೆಯಿಂದ ಹೊಸದಾಗಿ ನಿಮಾರ್ಣ ಆಗಿರುವ ರಸ್ತೆ ಮೂಲಕ ಸಂಚರಿಸಬೇಕು. ಪ್ರಸ್ತುತ ಇರುವ ಗೇಟ್ನಲ್ಲಿ ಪಾದಚಾರಿಗಳಿಗೆ ಸುರಕ್ಷಿತವಾಗಿ ದಾಟುವ ಬಗ್ಗೆ ವಿಕೇಟ್ ಗೇಟ್ ವ್ಯವಸ್ಥೆ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.