ರೈಲ್ವೆ ನೇಮಕಾತಿಯಲ್ಲಿ ಅನ್ಯಾಯ, ಕನ್ನಡ ಕ್ರಾಂತಿ ಸಂಘ ಆರೋಪ

IMG_20240307_113653_453.jpg
Published on

ಹುಬ್ಬಳ್ಳಿ: ಇಲ್ಲಿಯ ನೈಋತ್ಯ ರೈಲ್ವೆ ವಲಯದಲ್ಲಿ ನೇಮಕಾತಿ ಸಂದರ್ಭದಲ್ಲಿ ಕನ್ನಡಿಗರಿಗೆ ನಿರಂತರವಾಗಿ ಅನ್ಯಾಯವಾಗುತ್ತಿದ್ದು, ಇದನ್ನು ಸರಿಪಡಿಸದಿದ್ದರೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕನ್ನಡ ಕ್ರಾಂತಿ ಸಂಘದ ಅಧ್ಯಕ್ಷ ಸತ್ಯನಾರಾಯಣ ಎಂ. ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈಲ್ವೆ ಬೋರ್ಡ್ 2010ರಲ್ಲಿ ತರಬೇತಿ ಪಡೆದ ಡಿಪ್ಲೋಮಾ ಹಾಗೂ ಪದವೀಧರರನ್ನು ನೇಮಕಾತಿ ಮಾಡುವಂತೆ ಆದೇಶ ಮಾಡಿದೆ. ಆ ಮೂಲಕ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ಯೋಜನೆ ರೂಪಿಸಿತು. ಆದರೆ, ಈ ಆದೇಶ ಪಾಲನೆಯಾಗುತ್ತಿಲ್ಲ ಎಂದರು.

ನೈಋತ್ಯ ರೈಲ್ವೆ ಇಲಾಖೆ ಡಿಪ್ಲೋಮಾ, ಪದವೀಧರರಿಗೆ ಒಂದು ವರ್ಷದ ಅಪ್ರೆಂಟಿಸ್ಶಿಪ್ ತರಬೇತಿ ನೀಡುತ್ತಿದೆ. ರೈಲ್ವೆ ಬೋರ್ಡ್ ಆದೇಶದಂತೆ ಬೆಂಗಳೂರು, ಮೈಸೂರು ವಿಭಾಗಗಳು ತರಬೇತಿ ಪಡೆದವರಿಗಾಗಿ ನೇಮಕಾತಿ ಪ್ರಕ್ರಿಯೆ ನಡೆಸಿವೆ. ಆದರೆ, ಹುಬ್ಬಳ್ಳಿ ವಿಭಾಗದವರು ಸ್ಪಷ್ಟೀಕರಣ ಕೇಳಿ ಪುನಃ ರೈಲ್ವೆ ಬೋರ್ಡ್ಗೆ ಪತ್ರ ಬರೆದಿದ್ದಾರೆ. ಇದು ಕನ್ನಡಿಗರಿಗೆ ಮಾಡಿದ ಅನ್ಯಾಯ ಎಂದು ದೂರಿದರು.

ರೈಲ್ವೆ ಇಲಾಖೆಯ ಅನ್ಯಾಯವನ್ನು ಸರಿಪಡಿಸಿ ತರಬೇತಿ ಪಡೆದ ಡಿಪ್ಲೋಮಾ ಪದವೀಧರರಿಗೆ ಉದ್ಯೋಗ ನೀಡಬೇಕೆಂದು ಆಗ್ರಹಿಸಿದರು.
ಸಂಘದ ಉಪಾಧ್ಯಕ್ಷ ರವಿ ಕಮ್ಮಾರ ಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net