

ವಿರಾಜಪೇಟೆ: ವಿರಾಜಪೇಟೆ ವ್ಯಾಪ್ತಿಯಲ್ಲಿ ಆನೆ- ಮಾನವ ಸಂಘರ್ಷ ತಡೆಗಟ್ಟಲು 22ಕೋಟಿ ರೂ. ವೆಚ್ಚದಲ್ಲಿ ರೈಲು ಹಳಿಯ ಬ್ಯಾರಿಕೇಡ್ ಅಳವಡಿಕೆ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.
ಕೆದಮುಳ್ಳೂರು ಗ್ರಾಮದಲ್ಲಿ ಮುಖ್ಯಮಂತ್ರಿಗಳ ಗ್ರಾಮ ವಿಕಾಸ ಯೋಜನೆಯಡಿ ನಿರ್ಮಿಸಲಾದ ಸಮುದಾಯ ಭವನ, ವ್ಯಾಯಾಮಶಾಲೆ, ಸಂಜೀವಿನಿ ಕೇಂದ್ರವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಸೂರಿಲ್ಲದ ಬುಡಕಟ್ಟು ಕುಟುಂಬಗಳಿಗೆ ಶೀಘ್ರ ಮನೆ ಒದಗಿಸಿಕೊಡಲು ಕ್ರಮ ವಹಿಸಲಾಗುವುದು. ಕೆಲ ಗ್ರಾಮೀಣ ಪ್ರದೇಶಗಳಿಗೆ ಸಾರಿಗೆ ಬಸ್ ವ್ಯವಸ್ಥೆ ಇಲ್ಲದೆ ಸಮಸ್ಯೆಯಾಗಿರುವುದು ಗಮನಕ್ಕೆ ಬಂದಿದ್ದು, ಇದನ್ನು ಪರಿಹರಿಸಲು ಕ್ರಮವಹಿಸುವುದಾಗಿ ಹೇಳಿದರು.
ಕೆದಮುಳ್ಳೂರು ಗ್ರಾ.ಪಂ. ವೇಗವಾಗಿ ಬೆಳೆಯುತ್ತಿದ್ದು, ಸರ್ಕಾರಿ ಸೌಲಭ್ಯಗಳನ್ನು ಎಲ್ಲರೂ ಬಳಕೆ ಮಾಡಿಕೊಳ್ಳಬೇಕು. ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅನುದಾನ ಬಿಡುಗಡೆಯಾಗಿದ್ದು, ಶೀಘ್ರ ಕಾಮಗಾರಿ ಕೈಗೊಳ್ಳಲಾಗುವುದು ಎಂದರು.
ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಮಾತನಾಡಿ, ಹಿಂದೆ ಮರದ ಕೆಳಗೆ ಇನ್ನಿತರ ಕಡೆಗಳಲ್ಲಿ ಸಭೆಗಳನ್ನು ಮಾಡಲಾಗುತ್ತಿತ್ತು, ಜನಸಾಮಾನ್ಯರಿಗೆ ಅನುಕೂಲವಾಗಿಸುವ ನಿಟ್ಟಿನಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲಾಗಿದೆ. ಜನಸಾಮಾನ್ಯರ ಆರೋಗ್ಯದ ದೃಷ್ಟಿಯಿಂದ ವ್ಯಾಯಾಮ ಶಾಲೆ ಆರಂಭಿಸಲಾಗಿದ್ದು, ಪ್ರತಿಯೊಬ್ಬರೂ ಸದುಪಯೋಗಪಡಿಸಿಕೊಳ್ಳಬೇಕೆಂದರು.
ಗ್ರಾ.ಪಂ. ಅಧ್ಯಕ್ಷ ಮಾಳೇಟಿರ ಜಫ್ರಿ ಉತ್ತಪ್ಪ, ಮಾಳೇಟಿರ ಪ್ರಶಾಂತ್ ಉತ್ತಪ್ಪ ಮಾತನಾಡಿದರು.
ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕೆ.ಸಿ.ಅಪ್ಪಣ್ಣ, ಪಿಡಿಒ ಬಿ.ಮಣಿ ಹಾಗೂ ಸಂಜಿವಿನಿ ಒಕ್ಕೂಟದ ಸದಸ್ಯರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಸ್ವಸಹಾಯ ಸಂಘದ ಸದಸ್ಯರು ಇತರರು ಇದ್ದರು.