ರಾಮನಗರದಿಂದ ಬನ್ನೇರುಘಟ್ಟದವರೆಗೆ ರೈಲ್ವೇ ಬ್ಯಾರಿಕೇಡ್

ane
Published on

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ರಾಮನಗರ ಹಾಗೂ ಬನ್ನೇರುಘಟ್ಟ ಅರಣ್ಯ ವ್ಯಾಪ್ತಿಯಲ್ಲಿ ಜನವಸತಿ ಪ್ರದೇಶಗಳತ್ತ ಆನೆಗಳು ಕಾಲಿಡದಂತೆ ಹಾಗೂ ಜಮೀನುಗಳಲ್ಲಿ ಬೆಳೆ ರಕ್ಷಣೆಗೆ ರೈಲ್ವೇ ಕಾರಿಡಾರ್ ನಿರ್ಮಾಣವಾಗಲಿದ್ದು, ಇನ್ನೇರಡು ವರ್ಷದ ಅವಧಿಯೊಳಗೆ ಈ ಯೋಜನೆ ಸಂಪೂರ್ಣಗೊಳ್ಳಲಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಭರವಸೆ ನೀಡಿದ್ದಾರೆ.

ವಿಧಾನಪರಿಷತ್ ಪ್ರಶ್ನೋತ್ತರ ಕಲಾಪದ ವೇಳೆ ಸೋಮವಾರ ರಾಮನಗರದಲ್ಲಿನ ಆನೆ ಉಪಟಳದ ಬಗ್ಗೆ ವಿಧಾನಪರಿಷತ್ ಎಸ್. ರವಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಆನೆ-ಮಾನವ ಸಂಘರ್ಷ ನಿಯಂತ್ರಿಸಲು ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಸರ್ಕಾರ ಆದ್ಯತೆ ನೀಡಿದೆ. ಇನ್ನೆರಡು ವರ್ಷದಲ್ಲಿ ರೈಲ್ವೇ ಬ್ಯಾರಿಕೇಡ್ ನಿರ್ಮಾಣ ಪೂರ್ಣವಾಗಲಿದೆ. ರಾಮನಗರ ಜಿಲ್ಲೆಯ ಜನರ ಸಮಸ್ಯೆಗೆ ಸರ್ಕಾರ ಸ್ಪಂದಿಸಲಿದೆ. ಆನೆ ಶಿಬಿರ ನಿರ್ಮಾಣ ಮಾಡಲು ಹಲವು ಕಡೆಗಳಿಂದ ಬೇಡಿಕೆ ಇದೆ. ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದರು.

ಪುಟ್ಟ ಜಿಲ್ಲೆಯಲ್ಲಿ 15 ಸಾವು: ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆ ಪುಟ್ಟ ಜಿಲ್ಲೆಯಾಗಿದ್ದು ಆನೆಗಳಿಗೆ 15 ಜನ ರೈತರು ಮೃತಪಟ್ಟಿದ್ದಾರೆ. 40ಕ್ಕೂ ಹೆಚ್ಚು ಜನರು ಆನೆತುಳಿತಕ್ಕೆ ಒಳಗಾಗಿ ಶಾಶ್ವತವಾಗಿ ಅಂಗವಿಕಲಾಗಿದ್ದಾರೆ, ಆದ್ದರಿಂದ ಆನೆಗಳ ಹಾವಳಿ ತಡೆಗೆ ರೈಲ್ವೇ ಬ್ಯಾರಿಕೇಡ್‌ವೊಂದೇ ಪರಿಹಾರ ಇದನ್ನು ನಿಧಾನ ಮಾಡಿದರೆ ಮತ್ತಷ್ಟು ರೈತರ ಜೀವಗಳು ಬಲಿಯಾಗಲಿವೆ, ಬ್ಯಾರಿಕೇಡ್ ನಿರ್ಮಾಣಕ್ಕೆ 4 ಸಾವಿರ ಲಕ್ಷ ರೂ. ಅನುದಾನ ಬೇಕಿದೆ ಎಂದು ಅಂದಾಜಿಸಲಾಗಿದೆ. ರೈತರ ಪ್ರಾಣಗಳಿಗೆ ಹೋಲಿಸಿದರೆ ಸರ್ಕಾರಕ್ಕೆ ಇದು ದೊಡ್ಡಮೊತ್ತವಲ್ಲ ಎಂದು ರವಿಕುಮಾರ್ ಸಚಿವರ ಗಮನ ಸೆಳೆದರು.

3ರಿಂದ 5 ಗಂಟೆ ವೇಳೆ ಆತಂಕ: ಸಾಮಾನ್ಯವಾಗಿ ಇಷ್ಟೂ ಸಾವುಗಳು ಮುಂಜಾನೆ 3ರಿಂದ 5 ಗಂಟೆ ವೇಳೆಯಲ್ಲಿ ಸಂಭವಿಸಿದೆ, ರೈತರು ಜಮೀನುಗಳಲ್ಲಿ ಸಲು ಕಾಯುವ ವೇಳೆ ಆನೆ ದಾಳಿಗೆ ಮೃತಪಟ್ಟಿದ್ದಾರೆ. ಮುಂಜಾನೆ ವೇಳೆ ಹೊಲಗದ್ದೆಗಳತ್ತ ಹೋಗಲು ರೈತರು ಹಿಂಜರಿಯುತ್ತಿದ್ದಾರೆ. ಪ್ರಸ್ತುತ ಎಲ್ಲೆಡೆ ಉತ್ತಮ ಮಳೆಯಾಗುತ್ತಿದೆ ಆದರೆ ಆನೆಗಳ ದಾಳಿಗೆ ಹೆದರಿ ರೈತರು ಕೃಷಿ ಚಟುವಟಿಕೆಯಿಂದಲೇ ಹಿಂದೆ ಸರಿಯುತ್ತಿದ್ದಾರೆ, ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ರವಿಕುಮಾರ್ ಸಚಿವರಲ್ಲಿ ಮನವಿ ಮಾಡಿದರು.

ಅನೆ ಕ್ಯಾಂಪ್ ಮಾಡಿ: ಬನ್ನೇರುಘಟ್ಟ ಹಾಗೂ ರಾಮನಗರ ಜಿಲ್ಲಾ ವ್ಯಾಪ್ತಿಯ ಸಂಗಮ, ಮುತ್ತತ್ತಿ ಸೇರಿ ಸೂಕ್ತ ಸ್ಥಳಗಳನ್ನು ಗುರುತಿಸಿ ಆನೆಕ್ಯಾಂಪ್‌ಗಳನ್ನು ನಿರ್ಮಿಸಬೇಕು ಎಂದು ರವಿಕುಮಾರ್ ಒತ್ತಾಯಿಸಿದರು. ಈಗಾಗಲೇ ರಾಜ್ಯದಲ್ಲಿ 105 ಸಾಕಾನೆಗಳಿವೆ, ಹಲವು ಆನೆಕ್ಯಾಂಪ್‌ಗಳಿವೆ ಅದೇ ರೀತಿ ಸದಸ್ಯರ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಈ ವ್ಯಾಪ್ತಿಯಲ್ಲಿ ಆನೆಶಿಬಿರಗಳನ್ನು ಆರಂಭಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಿ ಕ್ರಮಕೈಗೊಳ್ಳಲಾಗುವುದು ಎಂದು ಅರಣ್ಯ ಸಚಿವರು ಕಲಾಪದಲ್ಲಿ ಭರವಸೆ ನೀಡಿದರು.

ಮಂಗಗಳ ಹಾವಳಿಗೆ ಊರು ಬಿಡಬೇಕಾಗಿದೆ: ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿ ಅನೆಗಳ ಹಾವಳಿ ಜತೆಗೆ ಮಂಗಗಳ ಕಾಟವೂ ವಿಪರೀತವಾಗಿದೆ, ಇದರಿಂದ ತೋಟಗಾರಿಕೆ ಬೆಳೆಗಾರರು ಪರದಾಡುವಂತಾಗಿದೆ, ತಮ್ಮ ಜಮೀನುಗಳಲ್ಲಿನ ಸಲನ್ನು ಉಳಿಸಿಕೊಳ್ಳಲು ರೈತರು ಸಾಧ್ಯವಾಗದಂತಾಗಿದೆ, ತೆಂಗಿನ ಮರಗಳಲ್ಲಿ ಒಂದು ತೆಂಗಿನ ಕಾಯಿಯೂ ಉಳಿಗಾಲವಿಲ್ಲದಂತಾಗಿದೆ, ರೈತರು ಎದುರಿಸುತ್ತಿರುವ ಅನೇಕ ಸಮಸ್ಯೆಗಳ ನಡುವೆ ಈ ಮಂಗಗಳ ಸಮಸ್ಯೆಯೂ ದುಬಾರಿಯಾಗಿದೆ ಎಂದು ರವಿಕುಮಾರ್ ಸಭೆಯಲ್ಲಿ ಗಮನ ಸೆಳೆದರು. ಪರಿಸ್ಥಿತಿ ಕೈಮೀರಿ ಹೋಗುತ್ತಿದೆ, ಮಂಗಗಳ ಹಾವಳಿಗೆ ನಾವೇ ಊರು ಬಿಡುವಂತ ಪರಿಸ್ಥಿತಿ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಇದನ್ನು ಗಂಭೀರವಾಗಿ ಪರಿಗಣಿಸಲಾಗುವುದು, ಇದರ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಮಂಗಗಳ ಸೆರೆ ಕಾರ್ಯಾಚರಣೆ ನಡೆಸಲಾಗುವುದು, ಮಂಗಗಳ ಹಾವಳಿಯಿಂದ ಬೆಳೆ ಹಾನಿ ಆಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ ಎಂದು ತಿಳಿಸಿದರು.

ರಾಜ್ಯನೀತಿ ಪರಿಶೀಲನೆ: ಅರಣ್ಯ ಇಲಾಖೆಯಲ್ಲಿ ಮುಂಚೂಣಿ ಸಿಬ್ಬಂದಿ ಕೊರತೆ ನೀಗಿಸಲು ಕ್ರಮ ವಹಿಸಲಾಗಿದ್ದು, ಈಗಾಗಲೇ 310 ಅರಣ್ಯ ವೀಕ್ಷಕರ ನೇಮಕಾತಿ ಮಾಡಲಾಗಿದೆ. ಈಗ 540 ಅರಣ್ಯ ರಕ್ಷಕರ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಖಾಲಿ ಇರುವ ಇನ್ನಷ್ಟು ಹುದ್ದೆಗಳನ್ನು ತುಂಬಲು ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದು ಈಶ್ವರ ಬಿ ಖಂಡ್ರೆ ತಿಳಿಸಿದರು. ರಾಜ್ಯದಲ್ಲಿ ವನ್ಯಜೀವಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಸರ್ಕಾರ ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದೆ. ಆನೆಗಳು ಮತ್ತು ಇತರೆ ವನ್ಯಪ್ರಾಣಿಗಳ ಒಂದು ಅರಣ್ಯ ಪ್ರದೇಶದಿಂದ ಇನ್ನೊಂದು ಅರಣ್ಯ ಪ್ರದೇಶಕ್ಕೆ ಅಡೆತಡೆ ಇರದಂತೆ ಸಂಚರಿಸಲು ವನ್ಯಜೀವಿ ಕಾರಿಡಾರ್ ರಾಜ್ಯನೀತಿ ರಚಿಸಲಾಗಿದ್ದು ಪರಿಶೀಲನೆ ಹಂತದಲ್ಲಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net