

ತುಮಕೂರು : ಜಿಲ್ಲೆಯಲ್ಲಿ ಪ್ರಗತಿಯಲ್ಲಿರುವ ರೈಲ್ವೆ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಮೂಲಸೌಲಭ್ಯ, ಬಂದರುಗಳು ಮತ್ತು ಒಳನಾಡು ಜಲಸಾರಿಗೆ ಹಾಗೂ ಲೋಕೋಪಯೋಗಿ ಇಲಾಖೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಬಿ.ಎಚ್.ಅನಿಲ್‌ಕುಮಾರ್ ರೈಲ್ವೆ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ತುಮಕೂರು-ದಾವಣಗೆರೆ ಹಾಗೂ ತುಮಕೂರು-ರಾಯದುರ್ಗ ರೈಲ್ವೆ ಮಾರ್ಗ ಪ್ರಗತಿ, ಎಚ್‌ಎಎಲ್, ರಾಷ್ಟ್ರೀಯ ಹೆದ್ದಾರಿ ಮತ್ತು ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದಂತೆ ನಡೆದ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.
ತುಮಕೂರು-ರಾಯದುರ್ಗ ರೈಲ್ವೆ ಯೋಜನೆಯು ತುಮಕೂರು, ಕೊರಟಗೆರೆ, ಮಧುಗಿರಿ, ಪಾವಗಡ ತಾಲೂಕುಗಳಲ್ಲಿ 102ಕಿಮೀ ಉದ್ದದಷ್ಟು ಹಾದು ಹೋಗಲಿದೆ. ಕಾಮಗಾರಿಯು 2024ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ರೈಲ್ವೆ ವಿಶೇಷ ಭೂ ಸ್ವಾಧೀನಾಧಿಕಾರಿ ಧರ್ಮಪಾಲ್ ಸಭೆಗೆ ಮಾಹಿತಿ ನೀಡಿದರು.
2007ರಲ್ಲಿ ಯೋಜನೆ ಪ್ರಾರಂಭವಾಗಿದ್ದರೂ ಈವರೆಗೂ ಕಾಮಗಾರಿ ಪೂರ್ಣಗೊಳಿಸಿಲ್ಲ. ಇದರಿಂದ ಯೋಜನಾ ವೆಚ್ಚ ದ್ವಿಗುಣಗೊಳ್ಳುತ್ತಿದ್ದು, ಸರ್ಕಾರದ ಮೇಲೆ ಹೊರೆ ಹೆಚ್ಚುತ್ತಿದೆ. ಯೋಜನೆಗೆ ಅಗತ್ಯವಾಗಿರುವ ಭೂ ಸ್ವಾಧೀನ ಪ್ರಕ್ರಿಯೆಯನ್ನು ಶೀಘ್ರವೇ ಪೂರ್ಣಗೊಳಿಸಿ ರೈಲ್ವೆ ಮಾರ್ಗ ನಿರ್ಮಾಣ ಕಾಮಗಾರಿ ಕೈಗೊಳ್ಳಬೇಕು ಎಂದು ಅನಿಲ್‌ಕುಮಾರ್ ನಿರ್ದೇಶಿಸಿದರು.
ತುಮಕೂರು-ದಾವಣಗೆರೆ ರೈಲ್ವೆ ಯೋಜನೆಯು ಜಿಲ್ಲೆಯಲ್ಲಿ 58 ಕಿ.ಮೀ ವ್ಯಾಪ್ತಿ ಹೊಂದಿದ್ದು, ಏಪ್ರಿಲ್ ಮಾಸಾಂತ್ಯದೊಳಗೆ ಅಗತ್ಯವಿರುವ 523 ಹೆಕ್ಟರ್ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ರೈತರಿಗೆ ನಿಯಮದನ್ವಯ ಪರಿಹಾರ ನೀಡಬೇಕು ಎಂದರು.
ರೈಲ್ವೆ ಯೋಜನೆಗಳಿಗೆ ಭೂಸ್ವಾಧೀನ ಪ್ರಕ್ರಿಯೆ ಮುಗಿಸಿ ಶೀಘ್ರವಾಗಿ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಬೇಕು ಎಂದು ಡೆಪ್ಯೂಟಿ ಚೀಫ್ ಇಂಜಿನಿಯರ್ ಪ್ರದೀಪ್‌ಗೆ ಸೂಚಿಸಿದರು.
ಗುಬ್ಬಿ ತಾಲೂಕಿನ ಬಿದರೆಹಳ್ಳ ಕಾವಲ್ ಬಳಿ ಪ್ರಾರಂಭವಾಗಿರುವ ಎಚ್‌ಎಎಲ್ ಘಟಕದಲ್ಲಿರುವ ಮೂಲ ಸೌಕರ್ಯಗಳ ಬಗ್ಗೆ ಮಾತನಾಡಿದ ಅನಿಲ್ ಅವರು, ಘಟಕಕ್ಕೆ ಅಗತ್ಯ ರಸ್ತೆ, ನೀರು ಸರಬರಾಜು, ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಸೂಚಿಸಿದರಲ್ಲದೆ ಕಡಬ ಕೆರೆಯಿಂದ ಪೈಪ್‌ಲೈನ್ ಮೂಲಕ ಘಟಕಕ್ಕೆ ನೀರು ಸರಬರಾಜು ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಸಭೆಗೂ ಮುನ್ನ ನಗರದ ಪ್ರವಾಸಿ ಮಂದಿರದಲ್ಲಿ ನಡೆಯುತ್ತಿರುವ 1 ಮತ್ತು 2ನೇ ಮಹಡಿಯ ಕಾಮಗಾರಿ ಪರಿಶೀಲಿಸಿ, ಗುಣಮಟ್ಟ ಕಾಪಾಡಿಕೊಳ್ಳುವಂತೆ ಸೂಚಿಸಿದರು.
ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಉಪವಿಭಾಗಾಧಿಕಾರಿ ವಿ.ಅಜಯ್, ತಹಸೀಲ್ದಾರ್‌ಗಳಾದ ಬಿ.ಆರತಿ, ಮೋಹನ್ ಕುಮಾರ್, ರೈಲ್ವೆ, ಎಚ್‌ಎಎಲ್, ರಾಷ್ಟ್ರೀಯ ಹೆದ್ದಾರಿ, ಬೆಸ್ಕಾಂ ಇಲಾಖೆ ಅಧಿಕಾರಿಗಳು ಇದ್ದರು.
ಗುಬ್ಬಿ ತಾಲೂಕು ಎಚ್‌ಎಎಲ್ ಲಘು ಹೆಲಿಕಾಪ್ಟರ್‌ಉತ್ಪಾದನಾ ಘಟಕಕ್ಕೆ ಹೆಚ್ಚುವರಿ ಭೂಮಿ ಒದಗಿಸುವ ಬಗ್ಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಪರಿಶೀಲಿಸಿ, ತೀರ್ಮಾನ ತೆಗೆದುಕೊಳ್ಳಲಾಗುವುದು. ಬಿ.ಎಚ್.ಅನಿಲಕುಮಾರ್ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ