

ಹುಬ್ಬಳ್ಳಿ : ರೈಲುಗಳಲ್ಲಿ ಟಿಕೆಟ್ ರಹಿತ ಪ್ರಯಾಣವನ್ನು ಕಡಿಮೆ ಮಾಡುವುದರ ಜತೆಗೆ ಅಧಿಕೃತ ಹಾಗೂ ನಿಗದಿತ ಪ್ರಯಾಣವನ್ನು ಉತ್ತೇಜಿಸಲು ನೈಋತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗದಿಂದ ಎಸ್ಎಸ್ಎಸ್ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಇತ್ತೀಚಿಗೆ ಟಿಕೆಟ್ ತಪಾಸಣೆ ಅಭಿಯಾನ ನಡೆಸಲಾಯಿತು.
ಹುಬ್ಬಳ್ಳಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಬೇಲಾ ಮೀನಾ ಮಾತನಾಡಿ, ‘ಇಂತಹ ತೀವ್ರ ತಪಾಸಣೆಗಳು ನ್ಯಾಯಸಮ್ಮತ ಪ್ರಯಾಣ ಕ್ರಮಗಳ ಪಾಲನೆ ಮತ್ತು ನಮ್ಮ ಬದ್ಧತೆಯನ್ನು ತೋರಿಸುತ್ತವೆ. ಎಲ್ಲ ಪ್ರಯಾಣಿಕರಲ್ಲಿಯೂ ಅನುಶಾಸನೆ ಮತ್ತು ಜವಾಬ್ದಾರಿತನದ ಸಂಸ್ಕೃತಿ ಬೆಳೆಸುತ್ತದೆ ಎಂದರು.
ಬೆಳಗ್ಗೆ 7ರಿಂದ ರಾತ್ರಿ 7 ಗಂಟೆಯವರೆಗೆ ಟಿಕೆಟ್ ತಪಾಸಣೆ ನಡೆದಿದ್ದು, ಒಟ್ಟು 23 ಟಿಕೆಟ್ ತಪಾಸಕರು ಮತ್ತು 10 ರೈಲ್ವೆ ರಕ್ಷಣಾ ಪಡೆ (ಆರ್ಪಿಎಫ್) ಸಿಬ್ಬಂದಿ ಕಾರ್ಯಾಚರಣೆಯಲ್ಲಿ ನಿಯೋಜಿತರಾಗಿದ್ದರು. 25 ರೈಲುಗಳ ಪ್ರಯಾಣಿಕರ ಟಿಕೆಟ್ ತಪಾಸಣೆ ನಡೆಸಲಾಯಿತು. ಒಟ್ಟು 181 ಪ್ರಕರಣಗಳು ಪತ್ತೆಯಾದವು. ಇದರಲ್ಲಿ ಅಧಿಕೃತ ಟಿಕೆಟ್ ಇಲ್ಲದೆ ಪ್ರಯಾಣ ಮಾಡಿರುವುದು, ಬುಕ್ಕಿಂಗ್ ಮಾಡದ ಸಾಮಾನು ಸಾಗಣೆ ಮತ್ತು ಅನಧಿಕೃತ ವಾಣಿಜ್ಯ ಚಟುವಟಿಕೆಗಳು ಸೇರಿವೆ. ಒಟ್ಟು 1 ಲಕ್ಷ ರೂ.ಗೂ ಹೆಚ್ಚು ದಂಡ ವಸೂಲಿ ಮಾಡಲಾಗಿದೆ.