

ಪ್ರಕಾಶ್ ಮಂಜೇಶ್ವರ, ಮಂಗಳೂರು
ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ರಾತ್ರಿ 8 ಗಂಟೆಗೆ ಹೊರಡುವ ಬೆಂಗಳೂರು-ಮಂಗಳೂರು ಸೆಂಟ್ರಲ್-ಬೆಂಗಳೂರು ಸಿಟಿ ರೈಲಿಗೆ ರಾತ್ರಿ 7.30 ಗಂಟೆ ತನಕವೂ ಟಿಕೆಟ್ ಬುಕ್ ಮಾಡಬಹುದು.
ಮಂಗಳೂರು ಸೆಂಟ್ರಲ್, ಬಂಟ್ವಾಳ, ಪುತ್ತೂರು ಸುಬ್ರಹ್ಮಣ್ಯ ರೋಡ್ ನಿಲ್ದಾಣಗಳಲ್ಲಿ ಬೆಂಗಳೂರು ಮಾರ್ಗದ ಚಾಲ್ತಿ (ಕರೆಂಟ್) ಟಿಕೆಟ್ ಕಾದಿರಿಸುವ ವ್ಯವಸ್ಥೆ ಮೇ 28ರಿಂದಲೇ ಮರುಚಾಲನೆ ಪಡೆದಿದೆ. ಈ ಮೂಲಕ ಜಿಲ್ಲೆಯ ಪ್ರಯಾಣಿಕರ ಬೇಡಿಕೆಗೆ ಪಾಲಕ್ಕಾಡು ರೈಲ್ವೆ ವಿಭಾಗ ಸ್ಪಂದಿಸಿದೆ.
ಪ್ರಥಮ ಲಾಕ್‌ಡೌನ್ ಕಳೆದು ಅನ್‌ಲಾಕ್ 1 ಆರಂಭವಾಗುವ ಸಂದರ್ಭ ಕಣ್ಣೂರು-ಮಂಗಳೂರು ಸೆಂಟ್ರಲ್-ಬೆಂಗಳೂರು ಸಿಟಿ ರೈಲು (06516) ಮಂಗಳೂರು ಸೆಂಟ್ರಲ್ ಮತ್ತು ಬೆಂಗಳೂರು ಸಿಟಿ ನಡುವೆ ಮಾತ್ರ ಸಂಚರಿಸುತ್ತಿತ್ತು. ಕಣ್ಣೂರಿಗೆ ಪ್ರಯಾಣಿಸುತ್ತಿರಲಿಲ್ಲ. ಈ ಸಂದರ್ಭ ಮಂಗಳೂರಿನಿಂದ ರಾತ್ರಿ ಎಂಟು ಗಂಟೆಗೆ ರೈಲು ಹೊರಡುತ್ತಿದ್ದರೆ, ರಾತ್ರಿ 7.30(ರೈಲು ಹೊರಡುವ ಅರ್ಧ ಗಂಟೆ ಮೊದಲು) ತನಕ ನಿಲ್ದಾಣದಲ್ಲಿ ಅರ್ಜಿ ಫಾರಂ ತುಂಬಿ ಚಾಲ್ತಿ ಟಿಕೆಟ್ ಕಾದಿರಿಸಲು ಅವಕಾಶವಿತ್ತು.
ಆದರೆ, ಏ.10ಕ್ಕೆ ಈ ರೈಲು ಕಣ್ಣೂರಿಗೆ ವಿಸ್ತರಣೆಯಾದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯ ಪ್ರಯಾಣಿಕರಿಗೆ ಮಂಗಳೂರಿನಿಂದ ರೈಲು ಹೊರಡುವ ಅರ್ಧ ಗಂಟೆ ಮೊದಲು ತನಕ ಟಿಕೆಟ್ ಕಾದಿರಿಸುವ ಅವಕಾಶ ತಪ್ಪಿತು. ಬದಲಾಗಿ ಕಣ್ಣೂರಿನಿಂದ ರೈಲು ಹೊರಡುವ ಅರ್ಧ ಗಂಟೆ ಮೊದಲು ಮಾತ್ರ ಟಿಕೆಟ್ ಕಾದಿರಿಸಲು ಅವಕಾಶ ನೀಡಲಾಯಿತು. ಈ ರೈಲು ಕಣ್ಣೂರಿನಿಂದ ಹೊರಡುತ್ತಿದ್ದುದು ಸಾಯಂಕಾಲ 4.40ಕ್ಕೆ. ಮಂಗಳೂರಿನಿಂದಲೂ ಸಾಯಂಕಾಲ 4.10 ತನಕ ಮಾತ್ರ ಟಿಕೆಟ್ ಕಾದಿರಿಸುವ ಅವಕಾಶ ನೀಡಲಾಗಿತ್ತು.
ಹೋರಾಟಗಾರರ ಪ್ರಯತ್ನಕ್ಕೆ ತಕ್ಷಣ ಸ್ಪಂದನೆ: ಟಿಕೆಟ್ ಕಾದಿರಿಸುವ ಅವಧಿ ಮೊಟಕುಗೊಳಿಸಿದ ಬಳಿಕ ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಕರಾವಳಿ ರೈಲ್ವೆ ಯಾತ್ರಿ ಸಂಘ ಪಾಲಕ್ಕಡ್ ರೈಲ್ವೇ ವಿಭಾಗೀಯ ಪ್ರಬಂಧಕರಿಗೆ ಮನವಿ ಸಲ್ಲಿಸಿತು. ತಕ್ಷಣ ಸ್ಪಂದನೆ ದೊರೆತಿದೆ. ಶುಕ್ರವಾರದಿಂದಲೇ ಹಳೇ ಪದ್ಧತಿಯಲ್ಲಿ ಸಾಯಂಕಾಲ 7.30ರ ತನಕ ಟಿಕೆಟ್ ಕಾದಿರಿಸಲು ಅವಕಾಶ ದೊರೆತಿದೆ. 06516 ನಂ.ರೈಲು ಮಂಗಳೂರು ರಾತ್ರಿ ಎಂಟಕ್ಕೆ ಮಂಗಳೂರು ಸೆಂಟ್ರಲ್‌ನಿಂದ ಹೊರಟು ಮರುದಿನ ಬೆಳಗ್ಗೆ 6.50ಕ್ಕೆ ಮಂಗಳೂರು ಸಿಟಿ ತಲುಪುತ್ತದೆ.
ಸರ್ಕಾರದ ಇತ್ತೀಚಿನ ಮಾರ್ಗಸೂಚಿ ಪ್ರಕಾರ ಕೇಂದ್ರದ ಸುಪರ್ದಿಯಲ್ಲಿರುವ ರೈಲ್ವೆ ಮತ್ತು ವಿಮಾನ ಮೂಲಕ ಅಂತಾರಾಜ್ಯ ಹಾಗೂ ಅಂತರ್ ಜಿಲ್ಲಾ ಪ್ರಯಾಣಕ್ಕೆ ಅವಕಾಶ ಒದಗಿಸಲಾಗಿದೆ. ಅನೇಕ ಸಂದರ್ಭಗಳಲ್ಲಿ ಸರ್ಕಾರಿ ಅಧಿಕಾರಿಗಳು, ಕಂಪನಿ ಮಾಲೀಕರು, ಅಧಿಕಾರಿ ವರ್ಗ ಹಾಗೂ ರಾಜ್ಯ ರಾಜಧಾನಿ ಸಂಪರ್ಕಿಸುವ ತುರ್ತು ಇರುವವರಲ್ಲಿ ದೊಡ್ಡ ಸಂಖ್ಯೆಯ ಜನರು ಪ್ರಯಾಣ ಬಗ್ಗೆ ಕೊನೆಯ ಕ್ಷಣದಲ್ಲಿ ತೀರ್ಮಾನಿಸುತ್ತಾರೆ. ಬುಕಿಂಗ್ ಅವಧಿ ಮೊಟಕುಗೊಂಡಿರುವುದರಿಂದ ದಕ್ಷಿಣ ಕನ್ನಡ ಭಾಗದ ಜನರಿಗೆ ಸಮಸ್ಯೆಯಾಗುತ್ತಿತ್ತು. ಈ ಬಗ್ಗೆ ನಮ್ಮ ಸಂಘ ಪಾಲಕ್ಕಾಡ್ ವಿಭಾಗದ ಗಮನ ಸೆಳೆಯಿತು. ತಕ್ಷಣ ಸಕಾರಾತ್ಮಕ ಸ್ಪಂದನೆ ದೊರೆತಿದೆ.
ಅನಿಲ್ ಹೆಗ್ಡೆ ತಾಂತ್ರಿಕ ಸಲಹೆಗಾರರು, ಕರಾವಳಿ ರೈಲ್ವೆ ಯಾತ್ರಿ ಸಂಘ,ದ.ಕ