ರೈಲು ಮಾರ್ಗ ಮಂಜೂರು

7manju2-Web
ಬೆಳಗಾವಿ ನಗರದ ಕಾಡಾ ಕಚೇರಿಯಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಬೆಳಗಾವಿ-ಧಾರವಾಡ ರೈಲ್ವೆ ಮಾರ್ಗದ ನಕ್ಷೆ ಲೋಕಾರ್ಪಣೆಗೊಳಿಸಿದರು. ಇಲಾಖೆಯ ಅಧಿಕಾರಿಗಳಿದ್ದರು.
Published on

ಬೆಳಗಾವಿ: ಉತ್ತರ ಕರ್ನಾಟಕ ಭಾಗದ ಜನರ ಹಲವು ದಶಕಗಳ ಬೇಡಿಕೆಯಾಗಿದ್ದ ‘ಬೆಳಗಾವಿ-ಧಾರವಾಡ ನೇರ ರೈಲು ಮಾರ್ಗ’ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಮಂಜೂರಾತಿ ನೀಡಿದ್ದು, ಶೀಘ್ರ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದ್ದಾರೆ.

ಬೆಳಗಾವಿ ನಗರದ ಕಾಡಾ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 73 ಕಿ.ಮೀ. ಉದ್ದದ ಬೆಳಗಾವಿ-ಧಾರವಾಡ ನೇರ ರೈಲು ಮಾರ್ಗಕ್ಕೆ ಅಂದಾಜು 927.40 ಕೋಟಿ ರೂ. ವೆಚ್ಚವಾಗಲಿದೆ. ನಿಗದಿತ ಸಮಯದಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಮುಗಿದರೆ 2 ವರ್ಷದ ಒಳಗಾಗಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

2019-20ನೇ ಸಾಲಿನಲ್ಲಿ ನೈರುತ್ಯ ರೈಲ್ವೆ ವಲಯವು ರೈಲ್ವೆ ಮಂಡಳಿಗೆ ಯೋಜನಾ ವರದಿ ಸಲ್ಲಿಸಿತ್ತು. ಬಳಿಕ ಮಂಡಳಿಯು ಪರಿಶೀಲನೆ ನಡೆಸಿ ಕಡತವನ್ನು ರೈಲ್ವೆ ಇಲಾಖೆಗೆ ಕಳುಹಿಸಿತ್ತು. ಇದೀಗ ಪ್ರಧಾನಿ ನರೇಂದ್ರ ಮೋದಿ ಮತ್ತು ರೈಲ್ವೆ ಸಚಿವ ಪಿಯುಷ್ ಗೋಯಲ್ ಅವರು ಸೋಮವಾರ ಬೆಳಗಾವಿ-ಧಾರವಾಡ ನೇರ ರೈಲು ಮಾರ್ಗ ನಿರ್ಮಾಣಕ್ಕೆ ಅನುಮೋದನೆ ನೀಡಿದ್ದಾರೆ ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರ 50:50 ಅನುಪಾತದಲ್ಲಿ ಬೆಳಗಾವಿ-ಧಾರವಾಡ ನೇರ ರೈಲು ಮಾರ್ಗ ನಿರ್ಮಾಣ ಮಾಡಲಾಗುತ್ತಿದೆ. ಈ ಮಾರ್ಗಕ್ಕೆ ಮತ್ತು ರೈಲ್ವೆ ನಿಲ್ದಾಣಗಳು ಸೇರಿ ಎಷ್ಟು ಪ್ರಮಾಣದಲ್ಲಿ ಭೂ ಸ್ವಾಧೀನಪಡಿಸಿಕೊಳ್ಳಬೇಕು ಎಂಬುದರ ಕುರಿತು ಈಗಾಗಲೇ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿಂತೆ ಕರ್ನಾಟಕ ರೈಲ್ವೆ ಮೂಲಕ ಸೌಕರ್ಯ ಅಭಿವೃದ್ಧಿ ಕಂಪನಿ (ಕೆ-ರೈಡ್) ಯು ಸ್ಥಳ ಸಮೀಕ್ಷೆ ನಡೆಸಿತ್ತು. ಇದೀಗ ಮತ್ತೊಮ್ಮೆ ಸಮೀಕ್ಷೆ ಕಾರ್ಯ ನಡೆಯಲಿದೆ. ಸಂಸತ್ತಿನ ಅಧಿವೇಶನ ಮುಗಿದ ಬಳಿಕ ರಾಜ್ಯ ಸರ್ಕಾರದೊಂದಿಗೆ ಸಭೆ ನಡೆಸಿ ಚರ್ಚಿಸಲಾಗುವುದು. 2022ರ ಒಳಗಾಗಿ ಕಾಮಗಾರಿ ಪೂರ್ಣಗೊಳಿಸಲು ರೈಲ್ವೆ ಇಲಾಖೆ ಯೋಜನೆ ಹಾಕಿಕೊಂಡಿದೆ ಎಂದು ತಿಳಿಸಿದರು. ರೈಲ್ವೆ ಇಲಾಖೆಯ ಅಧಿಕಾರಿಗಳು ಇದ್ದರು.

ಒಂದೂವರೆ ಗಂಟೆ ಪ್ರಯಾಣ

ಬೆಳಗಾವಿ-ಧಾರವಾಡ ನೇರ ರೈಲು ಮಾರ್ಗವು ಬೆಳಗಾವಿ ನಗರದ ರೈಲ್ವೆ ನಿಲ್ದಾಣದಿಂದ ಆರಂಭವಾಗಿ ದೇಸೂರ, ಕೆ.ಕೆ.ಕೊಪ್ಪ, ಬಾಗೇವಾಡಿ, ಎಂ.ಕೆ.ಹುಬ್ಬಳ್ಳಿ, ಹೂಲಿಕಟ್ಟಿ, ಕಿತ್ತೂರು, ತೇಗೂರ, ಮುಮ್ಮಿಗಟ್ಟಿ, ಕ್ಯಾರಕೊಪ್ಪ ಹಾಗೂ ಧಾರವಾಡ ರೈಲ್ವೆ ನಿಲ್ದಾಣಕ್ಕೆ ಮುಗಿಯಲಿದೆ. ಈ ಮಾರ್ಗದಲ್ಲಿ 11 ರೈಲ್ವೆ ನಿಲ್ದಾಣಗಳು, ಸೇತುವೆಗಳು, ಮೇಲ್ಸೆತುವೆಗಳು ನಿರ್ಮಾಣವಾಗಲಿದೆ. ಅಲ್ಲದೆ ಲೆವೆಲ್ ಕ್ರಾಸಿಂಗ್ ಗೇಟ್‌ಗಳ ನಿರ್ಮಾಣದ ಅವಶ್ಯಕತೆ ಬರುವುದಿಲ್ಲ. ಹಾಗಾಗಿ ಬೆಳಗಾವಿಯಿಂದ ಧಾರವಾಡಕ್ಕೆ ಒಂದೂವರೆ ಗಂಟೆಯಲ್ಲಿ ತಲುಪಬಹುದು ಎಂದು ಸಚಿವ ಸುರೇಶ ಅಂಗಡಿ ತಿಳಿಸಿದರು.

ತ್ರಿವಳಿ ನಗರಗಳ ಸಮಗ್ರ ಅಭಿವೃದ್ಧಿ ಉತ್ತರ ಕರ್ನಾಟಕ ಭಾಗದಲ್ಲಿ ವೇಗವಾಗಿ ಬೆಳೆಯುತ್ತಿರುವ ಬೆಳಗಾವಿ, ಧಾರವಾಡ ಮತ್ತು ಹುಬ್ಬಳ್ಳಿ ನಗರಗಳ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಯೋಜನೆ ರೂಪಿಸಲಾಗುತ್ತಿದೆ. ಬೆಳಗಾವಿ-ಧಾರಾವಾಡ ನೇರು ರೈಲ್ವೆ ಮಾರ್ಗದಿಂದ ಕೈಗಾರಿಕೆ, ಉತ್ಪಾದನೆ ಕ್ಷೇತ್ರಕ್ಕೆ ಹೆಚ್ಚು ಅನುಕೂಲ. ಸ್ಥಳೀಯ ಮಟ್ಟದಲ್ಲಿ ವ್ಯಾಪಾರ- ವಹಿವಾಟು ವಿಸ್ತಾರಗೊಳ್ಳಲಿದೆ.| ಸುರೇಶ ಅಂಗಡಿ ರೈಲ್ವೆ ಖಾತೆ ರಾಜ್ಯ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net