

ಹುಬ್ಬಳ್ಳಿ : ಮೈಸೂರು -ಸೊಲ್ಲಾಪುರ ರೈಲು ಪಂಢರಪುರವರೆಗೆ ವಿಸ್ತರಿಸುವ ಬಗ್ಗೆ ಬಹಳ ದಿನಗಳಿಂದ ಇದ್ದ ಹುಬ್ಬಳ್ಳಿ, ಬಾಗಲಕೋಟೆ ಹಾಗೂ ವಿಜಯಪುರದ ಜನರ ಬೇಡಿಕೆ ಈಗ ಕೈಗೂಡಿದೆ. ಇದೀಗ ಹುಬ್ಬಳ್ಳಿ, ಗದಗ ಹಾಗೂ ಬಾಗಲಕೋಟೆ ಭಾಗದ ಜನರಿಗೆ ನೇರ ಪಂಢರಪುರದ ವಿಠೋಬ ದರ್ಶನದ ಅವಕಾಶ ದೊರೆತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ಮೈಸೂರಿನಿಂದ ಹುಬ್ಬಳ್ಳಿ ಮಾರ್ಗವಾಗಿ ಗದಗ, ಬಾಗಲಕೋಟೆ, ವಿಜಯಪುರದಿಂದ ಸೊಲ್ಲಾಪುರಕ್ಕೆ ಸಂಚರಿಸುತ್ತಿದ್ದ ಗೋಲಗುಂಬಜ್ ಎಕ್ಸ್ಪ್ರೆಸ್ ರೈಲನ್ನು ಪಂಢರಪುರದವರೆಗೆ ವಿಸ್ತರಿಸಲು ಈ ಭಾಗದ ಜನರು ಬೇಡಿಕೆ ಇಟ್ಟಿದ್ದರು.
ಈ ಕುರಿತು ಕೇಂದ್ರ ರೈಲ್ವೆ ಸಚಿವರಿಗೆ ಪತ್ರ ಬರೆದು ಮನವಿ ಸಲ್ಲಿಸಲಾಗಿತ್ತು. ನಿರಂತರ ಪ್ರಯತ್ನದ ಫಲವಾಗಿ ಆ. 14 ರಂದು ನೈಋತ್ಯ ರೈಲ್ವೆಯ ಪ್ರಸ್ತಾವನೆಯಂತೆ ಈ ವಿಸ್ತರಣೆಗೆ ಒಪ್ಪಿಗೆ ಲಭಿಸಿದೆ ಎಂದು ಸಚಿವ ಜೋಶಿ ತಿಳಿಸಿದ್ದಾರೆ.
ನಿತ್ಉ ಮೈಸೂರಿನಿಂದ ಮಧ್ಯಾಹ್ನ 3.45 ಕ್ಕೆ ಹೊರಡುವ ರೈಲು ಪಂಢರಪುರವನ್ನು ಮರುದಿನ ಮಧ್ಯಾಹ್ನ 12.25ಕ್ಕೆ ತಲುಪಿ, ಮರಳಿ ಪಂಢರಪುರದಿಂದ ಮಧ್ಯಾಹ್ನ 1 ಗಂಟೆಗೆ ಹೊರಟು, ಮೈಸೂರನ್ನು ಮಾರನೇ ದಿನ ಬೆಳಗ್ಗೆ 10.30ಕ್ಕೆ ತಲುಪುವುದು. ವಿಸ್ತರಣೆ ಆರಂಭದ ದಿನಾಂಕ ಶೀಘ್ರದಲ್ಲೇ ಪ್ರಕಟಣೆಯಾಗಲಿದೆ ಎಂದೂ ಸಚಿವ ಪ್ರಲ್ಹಾದ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.