

ಹುಬ್ಬಳ್ಳಿ : ಸೊಲ್ಲಾಪುರ-ಗದಗ ಹಾಗೂ ದಾದರ-ಗದಗ ಎಕ್ಸ್ಪ್ರೆಸ್ ರೈಲುಗಳು ಈಗ ಹೊಸಪೇಟೆವರೆಗೂ ಸಂರ್ಪಸಲು ರೈಲ್ವೆ ಮಂಡಳಿ ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ಈ ಎರಡೂ ಎಕ್ಸ್ಪ್ರೆಸ್ ರೈಲುಗಳು ಈ ಮೊದಲು ಗದಗವರೆಗೆ ಮಾತ್ರ ಸಂಚರಿಸುತ್ತಿದ್ದವು. ವಿಜಯಪುರ, ಬಾಗಲಕೋಟೆ, ಗದಗ. ಕೊಪ್ಪಳ ಹಾಗೂ ಹೊಸಪೇಟೆ ಭಾಗದ ಜನರು ಈ ರೈಲುಗಳ ಓಡಾಟವನ್ನು ಹೊಸಪೇಟೆವರೆಗೂ ವಿಸ್ತರಿಸಬೇಕೆಂಬ ಬೇಡಿಕೆ ಇಟ್ಟಿದ್ದರು. ಆ ಭಾಗದ ಶಾಸಕರು, ಸಂಸದರುಗಳ ಬೇಡಿಕೆಯನ್ವಯ ಕೇಂದ್ರ ಸಚಿವ ಜೋಶಿ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರನ್ನು ಭೇಟಿ ಮಾಡಿ, ಒತ್ತಾಯಿಸಿದ್ದರ ಪರಿಣಾಮವಾಗಿ ಈಗ ರೈಲ್ವೆ ಮಂಡಳಿ ಈ ವಿಸ್ತರಣೆಗೆ ಹಸಿರು ನಿಶಾನೆ ತೋರಿಸಿದೆ.
ಈ ಭಾಗಗಳ ಜನತೆಯ ಬಹುದಿನಗಳ ಬೇಡಿಕೆ ಈಡೇರಿರುವುದು ಸಂತಸ ತಂದಿದೆ ಎಂದು ಸಚಿವ ಜೋಶಿ ಹರ್ಷವ್ಯಕ್ತಪಡಿಸಿದ್ದಾರೆ. ಈ ವಿಸ್ತರಣೆಯನ್ವಯ ರೈಲುಗಳ ಸಂಚಾರ ಶೀಘ್ರ ಪ್ರಾರಂಭಗೊಳ್ಳಲಿದೆ ಎಂದು ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.