

ಹುಬ್ಬಳ್ಳಿ : ನೈಋತ್ಯ ರೈಲ್ವೆ ವಲಯವು ಹೊಸಪೇಟೆ- ಮುಂಬೈ ಮಧ್ಯೆ ರೈಲು ಸಂಚಾರ ಪ್ರಾರಂಭಿಸಿದೆ.
ಈ ಕುರಿತು ಮಾಹಿತಿ ನೀಡಿರುವ ರಾಷ್ಟ್ರೀಯ ರೈಲ್ವೆ ಬಳಕೆದಾರರ ಸಲಹಾ ಮಂಡಳಿ ಸದಸ್ಯ ಭರತ ಬಾಬುಲಾಲ ಜೈನ್, ತಮ್ಮ ಹಾಗೂ ಹಲವಾರು ಸಮಾಜ ಸೇವಕರ ಪ್ರಯತ್ನದಿಂದಾಗಿ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ ಎಂದು ತಿಳಿಸಿದ್ದಾರೆ.
ಹೊಸಪೇಟೆಯಿಂದ ಮುಂಬೈಗೆ ರೈಲು ಸಂಚಾರ ಪ್ರಾರಂಭಿಸುವಂತೆ ಕಳೆದ ಏಳು ವರ್ಷಗಳಿಂದ ಬೇಡಿಕೆ ಇತ್ತು. ಈ ಬಗ್ಗೆ ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕರಿಗೆ ಹಲವಾರು ಬಾರಿ ಮನವಿ ಸಲ್ಲಿಸಲಾಗಿತ್ತು. ರೈಲು ಸಂಚಾರ ಪ್ರಾರಂಭಕ್ಕೆ ನಿರಂತರ ಒತ್ತಡ ಹೇರಲಾಗಿತ್ತು ಎಂದು ಹೇಳಿದ್ದಾರೆ.
ಸೊಲ್ಲಾಪುರದಿಂದ ಹೊಸಪೇಟೆ ರೈಲು ಸಂಚಾರಕ್ಕು ಸಹ ರೈಲ್ವೆ ಮಂಡಳಿ ಸಮ್ಮತಿ ಸೂಚಿಸಿದೆ. ಈ ರೈಲಿನ ಸಂಚಾರದ ದಿನವನ್ನು ಶೀಘ್ರ ಪ್ರಕಟಿಸುವುದಾಗಿ ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ ಅವರು ತಿಳಿಸಿದ್ದಾಗಿ ಹೇಳಿದರು.
ಈ ರೈಲು ಸಂಚಾರದಿಂದ ಹೊಸಪೇಟೆ ಮತ್ತು ಸಮೀಪದ ಪ್ರದೇಶಗಳ ಜನರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಹುಬ್ಬಳ್ಳಿ- ಹಜರತ್ ನಿಜಾಮುದ್ದಿನ್ ಎಕ್ಸ್ಪ್ರೆಸ್ ರೈಲು ಸಂಚಾರವನ್ನು ಹೊಸಪೇಟೆ ನಿಲ್ದಾಣದವರೆಗೆ ವಿಸ್ತರಿಸುವಂತೆ ಬೇಡಿಕೆ ಇದ್ದು, ಇದಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ ಅವರಿಗೆ ಮನವಿ ಸಲ್ಲಿಸಲಾಗಿದೆ. ಅಧಿಕಾರಿಗಳು ಸಹ ಸಕಾರಾತ್ಮಕವಾಗಿ ಸ್ಪಂಧಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ವಿವರಿಸಿದ್ದಾರೆ.