ಡೀಸೆನ್ಸ್ ಸ್ಪಾ ವೇಶ್ಯಾವಾಟಿಕೆ ಕೇಂದ್ರದಲ್ಲಿದ್ದ ಹೊರ ರಾಜ್ಯದ 9 ಮಹಿಳೆಯರ ರಕ್ಷಣೆ: ಆರೋಪಿ ಸತ್ತಾರ್ ಸೆರೆ

arrest
Published on

ಬೆಂಗಳೂರು: ರಾಜ್ಯರಾಜಧಾನಿಯ ಎಚ್​.ಬಿ.ಆರ್.ಲೇ ಔಟ್​ನ 2ನೇ ಬ್ಲಾಕ್​ ಒಂದನೇ ಹಂತದಲ್ಲಿರುವ ಡೀಸೆನ್ಸ್ ಸ್ಪಾ ದಲ್ಲಿ ನಡೆಯುತ್ತಿದ್ದುದೆಲ್ಲ ವೇಶ್ಯಾವಾಟಿಕೆ ದಂಧೆ. ಇದನ್ನು ನಡೆಸುತ್ತಿದ್ದ ಸತ್ತಾರ್ ಬೇಗ್​ (47) ನನ್ನು ಪೊಲೀಸರು ನಿನ್ನೆ ಬಂಧಿಸಿದ್ದಾರೆ. ದಂಧೆಗೆ ಸಿಲುಕಿದ್ದ ಹೊರರಾಜ್ಯದ ಒಂಭತ್ತು ಮಹಿಳೆಯರನ್ನು ರಕ್ಷಿಸಿದ್ದಾರೆ.

ಆರೋಪಿ ಸತ್ತಾರ್ ಬೇಗ್​, ಉದ್ಯೋಗ ಕೊಡಿಸುವ ನೆಪದಲ್ಲಿ ಹೊರ ರಾಜ್ಯದಿಂದ ಅಮಾಯಕ ಯುವತಿಯರನ್ನು ಕರೆಸಿಕೊಳ್ಳುತ್ತಿದ್ದ. ಅವರನ್ನು ಸ್ಪಾದಲ್ಲಿ ಉದ್ಯೋಗಕ್ಕೆ ಇರಿಸಿಕೊಂಡು, ವೇಶ್ಯಾವಾಟಿಕೆ ದಂಧೆಗೆ ತಳ್ಳುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡದುಕೊಂಡ ಸಿಸಿಬಿಯ ಮಹಿಳಾ ಸಂರಕ್ಷಣಾ ದಳದ ಪೊಲೀಸರು ಬುಧವಾರ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಈತನ ಬಳಿ ಇದ್ದ ಎರಡು ಮೊಬೈಲ್ ಫೋನ್​ ಹಾಗೂ ನಗದು 2,600 ರೂಪಾಯಿ ವಶಪಡಿಸಿಕೊಂಡಿದ್ದಾರೆ.

ಆರೋಪಿಯು ಗಿರಾಕಿಗಳನ್ನು ಫೋನ್ ಮೂಲಕ ಸಂಪರ್ಕ ಮಾಡಿಕೊಂಡು ಕೆಲವು ಗಿರಾಕಿಗಳಿಗೆ ತನ್ನ ಮೊಬೈಲ್‍ನಿಂದ ಹುಡುಗಿಯರ ಫೋಟೋ ಕಳುಹಿಸಿ, ವೇಶ್ಯಾವಾಟಿಕೆ ಬರಮಾಡಿಕೊಂಡು ವೇಶ್ಯಾವಾಟಿಕೆ ದಂಧೆ ನಡೆಸಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿರುವುರುದು ಕಂಡುಬಂದಿರುತ್ತದೆ. ಆರೋಪಿಯು ವಿಸ್ತೃತ ವೇಶ್ಯಾವಾಟಿಕೆ ಜಾಲವನ್ನು ಹೊಂದಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸತ್ತಾರ್ ಬೇಗ್ ಬೆಂಗಳೂರಿನ ಗಂಗಾನಗರದ 5ನೇ ಮುಖ್ಯರಸ್ತೆಯ 2 ಸಿ ಕ್ರಾಸ್​ ನ ನಿವಾಸಿ. ಈತನ ಜತೆಗೆ ಸ್ಪಾ ಗೆ ಗಿರಾಕಿಯಾಗಿ ಬಂದಿದ್ದ ಸಯ್ಯದ್ ಫಾರೂಕ್ ಎಂಬಾತನನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಕೆ.ಜಿ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net