ಸ್ವಾವಲಂಬಿ ಬದುಕಿಗೆ ಆಧಾರ ‘ಅಕ್ಕ ಕೆಫೆ’

ಜಿಲ್ಲೆಯಲ್ಲಿ ಆರು ಕಡೆ ನಿರ್ವಹಣೆ ಎರಡು ತಿಂಗಳಲ್ಲಿ 30 ಲಕ್ಷ ರೂ. ವ್ಯಾಪಾರ
ರಾಯಚೂರಿನ ಜಿಲ್ಲಾ ಪಂಚಾಯಿತಿ ಆವರಣದಲ್ಲಿರುವ ಅಕ್ಕ ಕೆಫೆ ಹೊರನೋಟ.
ರಾಯಚೂರಿನ ಜಿಲ್ಲಾ ಪಂಚಾಯಿತಿ ಆವರಣದಲ್ಲಿರುವ ಅಕ್ಕ ಕೆಫೆ ಹೊರನೋಟ.
Published on

ವಿಜಯವಾಣಿ ವಿಶೇಷ ರಾಯಚೂರು

ಮಹಿಳೆಯರ ಸಾಮಾಜಿಕ, ಆರ್ಥಿಕ ಸಬಲೀಕರಣ ಹಾಗೂ ಸ್ವಾವಲಂಬನೆಯನ್ನು ಗುರಿಯಾಗಿಸಿಕೊಂಡು ಆರಂಭಿಸಲಾಗಿರುವ ‘ಅಕ್ಕ ಕೆಫೆ’ಗಳು ಅಭೂತಪೂರ್ವ ಯಶಸ್ಸು ಸಾಧಿಸಿದ್ದು, ಕಡಿಮೆ ಅವಧಿಯಲ್ಲಿಯೇ ಗ್ರಾಹಕರ ಮೆಚ್ಚುಗೆ ಗಳಿಸಿ ಉತ್ತಮ ವ್ಯಾಪಾರದೊಂದಿಗೆ ಭರಪೂರ ಆದಾಯ ಗಳಿಸುತ್ತಿವೆ.

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ (ಎನ್‌ಆರ್‌ಎಲ್‌ಎಂ) ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಕ್ಕ ಕೆಫೆ ನಾಮಬಲದೊಂದಿಗೆ ವಿವಿಧ ಸ್ವಸಹಾಯ ಸಂಘ, ಸಮಾಜದಲ್ಲಿ ನಿರ್ಲಕ್ಷ್ಯಕ್ಕೆ ಒಳಪಟ್ಟ ತೃತೀಯಲಿಂಗಿಗಳ ಬದುಕು ಹಸನದ ಜತೆಗೆ ಸ್ವಾವಲಂಬನೆಗೆ ಒತ್ತು ನೀಡಲು ಆರಂಭಿಸಲಾಗಿರುವ ಅಕ್ಕ ಕೆಫೆಗಳಿಗೆ ಜಿಲ್ಲಾ ಪಂಚಾಯಿತಿ ಬಲ ತುಂಬಿದೆ.

ನಾಲ್ಕು ಸಾವಿರ ಚದರ ಅಡಿಗಿಂತ ಹೆಚ್ಚು ಜಾಗದಲ್ಲಿ ಕ್ಯಾಂಟೀನ್ ನಿರ್ಮಾಣಕ್ಕೆ 15 ಲಕ್ಷ ರೂ. ಮತ್ತು ನಾಲ್ಕು ಸಾವಿರ ಚದರ ಅಡಿಗಿಂತ ಕಮ್ಮಿ ಜಾಗದಲ್ಲಿದ್ದರೆ ಜಿಪಂನಿಂದ 10 ಲಕ್ಷ ರೂ. ಸಹಾಯಧನ ನೀಡಲಾಗಿದ್ದು, ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಗಳಿಂದ ಕೆಫೆ ನಡೆಸುವವರಿಗೆ ತರಬೇತಿ ನೀಡಲಾಗಿದೆ. ಕೆಫೆಗೆ ಅಗತ್ಯವಿರುವ ಅಡುಗೆ ಒಲೆ, ಸ್ಟೋವ್, ಟೇಬಲ್, ಕುರ್ಚಿ, ಫ್ರಿಡ್ಜ್ ಸೇರಿ ನಾನಾ ಸಾಮಾಗ್ರಿಗಳನ್ನು ಜಿಪಂ ವಿನ್ಯಾಸಗೊಳಿಸಿರುವ ಮಾದರಿಯಲ್ಲಿ ಕ್ಯಾಂಟೀನ್ ಸಿದ್ಧಪಡಿಸಿ ಮಹಿಳಾ ಸ್ವ ಸಹಾಯ ಸಂಘಗಳಿಗೆ ಜಿಲ್ಲಾ ಪಂಚಾಯಿತಿಯೇ ಹಸ್ತಾಂತರಿಸಿದೆ.

ಅಕ್ಕ ಕೆಫೆಯ ಸಂಪೂರ್ಣ ಜವಾಬ್ದಾರಿಯನ್ನು ವಿಶೇಷ ವರ್ಗದ ಸ್ವ-ಸಹಾಯ ಸಂಘದ ಮಹಿಳೆಯರಿಗೆ, ಎಸ್ಸಿ-ಎಸ್ಟಿ, ಒಬಿಸಿ ವರ್ಗದವರಿಗೆ ಅಂಗವಿಕಲರು, ತೃತೀಯ ಲಿಂಗಿಗಳಿಗೂ ಬದುಕು ಕಟ್ಟಿಕೊಳ್ಳಲು ಈ ಮೂಲಕ ಜವಾಬ್ದಾರಿ ನೀಡಲು ಸಿದ್ಧತೆ ನಡೆಸಿದೆ. ಸದ್ಯ ಮಹಿಳಾ ಸ್ವಸಹಾಯ ಮಹಿಳಾ ಸಂಘದ ವಿಶೇಷ ವರ್ಗದವರು ಮುಂದೆ ಬಂದಿದ್ದಾರೆ. ಆದರೆ, ತೃತೀಯಲಿಂಗಿಗಳಲ್ಲಿ ವಿಶ್ವಾಸ ತುಂಬಿ ಅವರಿಗೂ ಅಕ್ಕ ಕೆಫೆಯ ಹೊಣೆಗಾರಿಕೆ ನೀಡುವ ಚಿಂತನೆ ಜಿಪಂ ಅಧಿಕಾರಿಗಳು ಆರಂಭಿಸಿದ್ದಾರೆ.

ಇದರ ಜತೆಗೆ ಅಕ್ಕ ಕೆಫೆಯಲ್ಲಿ ಮಾಂಸಾಹಾರ ಮತ್ತು ಸಸ್ಯಾಹಾರ ಎರಡಕ್ಕೂ ಆದ್ಯತೆ ಕೊಡಲಾಗುತ್ತಿದೆ. ಜಿಲ್ಲೆಯ 6 ಕೆಫೆಗಳ ಪೈಕಿ ಸಿಂಧನೂರಿನ ಕೆಫೆ ಕೇವಲ ಸಸ್ಯಹಾರಕ್ಕೆ ಮೀಸಲಿಡಲಾಗಿದೆ. ಉಳಿದಂತೆ ಪ್ರತಿ ದಿನ ಬಗೆ-ಬಗೆಯ ಉಪಾಹಾರ, ಚಹಾ, ಕಾಫಿ, ಹಾಲು, ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿದೆ.

13.61 ಲಕ್ಷ ರೂ. ಲಾಭ

ರಾಯಚೂರಿನ ತಾಯಿ ಮಕ್ಕಳ ಆಸ್ಪತ್ರೆ, ಜಿಲ್ಲಾ ಪಂಚಾಯಿತಿ ಕಚೇರಿ, ಜಿಲ್ಲಾಧಿಕಾರಿ ಕಚೇರಿ ಹಾಗೂ ಲಿಂಗಸುಗೂರು, ಸಿಂಧನೂರು ಹಾಗೂ ಮಸ್ಕಿಯಲ್ಲಿ ಅಕ್ಕ ಕೆಫೆ ಎರಡು ತಿಂಗಳ ಹಿಂದೆ ಶುರುವಾಗಿವೆ. ಈ ಪೈಕಿ ಜುಲೈ ಮತ್ತು ಆಗಸ್ಟ್‌ನಲ್ಲಿ 30.18 ಲಕ್ಷ ರೂ. ವ್ಯಾಪಾರವಾಗಿದ್ದು, ಆಹಾರ ಪದಾರ್ಥಗಳಿಗೆ 16.70 ಲಕ್ಷ ರೂ. ಖರ್ಚಾಗಿದ್ದು, 13.61 ಲಕ್ಷ ರೂ. ಲಾಭವಾಗಿದೆ. ಇಲಾಖೆಯ ಬೆಂಬಲದೊಂದಿಗೆ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಂದಲೇ ನಡೆಸಲ್ಪಡುತ್ತಿರುವ ಈ ಕೆಫೆಗಳು ಅತ್ಯಂತ ಕಡಿಮೆ ಅವಧಿಯಲ್ಲಿ ಇಷ್ಟು ದೊಡ್ಡ ಮಟ್ಟದ ಲಾಭ ಹಾಗೂ ವಹಿವಾಟು ನಡೆಸಿರುವುದು ನಿಜಕ್ಕೂ ಮಾದರಿಯಾಗಿದೆ.

ಜಿಲ್ಲೆಯ ಆರು ಕಡೆ ಸರ್ಕಾರಿ ಕಚೇರಿ ಹಾಗೂ ಜಾಗದಲ್ಲಿ ಜಿಪಂ ಅನುದಾನದಲ್ಲಿ ಅಕ್ಕ ಕೆಫೆ ಆರಂಭಿಸಲಾಗಿದೆ. ಕಳೆದ ಎರಡು ತಿಂಗಳಲ್ಲಿ 6 ಕೆಫೆಗಳಲ್ಲಿ 30 ಲಕ್ಷ ರೂ. ವ್ಯಾಪಾರವಾಗಿದ್ದು, 13.61 ಲಕ್ಷ ರೂ. ಲಾಭವಾಗಿದೆ. ಇದರಿಂದ ಮಹಿಳೆಯರ ಸಾಮಾಜಿಕ, ಆರ್ಥಿಕವಾಗಿ ಬೆಳೆಯಲು ಸಾಧ್ಯವಾಗಿದೆ.

ಈಶ್ವರ ಕುಮಾರ ಕಾಂದೂ, ಜಿಪಂ ಸಿಇಒ, ರಾಯಚೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net