

ಪ್ರಮುಖ ಮುಖ್ಯಾಂಶಗಳು
ರಾಯಚೂರು ದೇಶದ ಚಾರಿತ್ರಿಕ ಇತಿಹಾಸದಲ್ಲಿ ಋಷಿ ಮುನಿಗಳು ಯೋಗ ಮಾಡುತ್ತ ನೂರಾರು ವರ್ಷ ಬದುಕಿದ್ದರು. ಆದರೀಗ ಕಾಲ ಬದಲಾಗಿದೆ. ಜನರು ಕಾಯಿಲೆಗಳ ನಿವಾರಣೆಗೆ ಯೋಗ, ಧ್ಯಾನ ಮಾಡಬೇಕೆಂದು ಡಿಟಿಜಿ ಬಾಲಕಿಯರ ಪ್ರೌಢ ಶಾಲೆಯ ಕಾರ್ಯದರ್ಶಿ ಶಿವಾನಂದ ಚುಕ್ಕಿ ಹೇಳಿದರು.
ನಗರದ ಡಿಟಿಜಿ ಬಾಲಕಿಯರ ಪ್ರೌಢ ಶಾಲೆಯ ಆವರಣದಲ್ಲಿ ಶನಿವಾರ ವಿಜಯವಾಣಿ ದಿನಪತ್ರಿಕೆ, ಭಾರತ ಸೇವಾದಳ ಜಿಲ್ಲಾ ಸಮಿತಿ ,ಡಿಟಿಜಿ ಬಾಲಕಿಯರ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜು ಮತ್ತು ಮೆರಾ ಯುವ ಭಾರತ ರಾಯಚೂರು ವತಿಯಿಂದ ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ ಘೋಷ ವಾಕ್ಯದಡಿ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶದ ಪ್ರಧಾನಿ ನರೇಂದ್ರ ಮೋದಿಯವರು ಯೋಗವನ್ನು ಮಸ್ತಕದಲ್ಲಿ ಬರುವಂತೆ ಮಾಡಿದ್ದರಿಂದ ಯೋಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಮನ್ನಣೆ ಪಡೆದಿದೆ ಎಂದರು.
ಕಾರ್ಯಕ್ರಮ ಉದ್ಘಾಟನೆ ಮಾಡಿದ ಭಾರತ ಸೇವಾದಳದ ಜಿಲ್ಲಾಧ್ಯಕ್ಷ ವೀರುಪಾಕ್ಷಪ್ಪ ಕ್ಯಾದಿಗೇರಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮನುಷ್ಯನ ಒತ್ತಡದ ವೇಗದ ಬದುಕಿಗೆ ಯೋಗವೇ ಆಸರೆಯಾಗಿದೆ. ಪ್ರತಿಯೊಬ್ಬರ ಆರೋಗ್ಯ ವೃದ್ಧಿಗೆ ಪ್ರಾಣಾಯಾಮದಂತಹ ಯೋಗದ ಪಟ್ಟುಗಳನ್ನು ಮಾಡುವ ಹವ್ಯಾಸ ಬೆಳೆಸಿಕೊಳ್ಳಬೇಕು. ಆರೋಗ್ಯ ರಕ್ಷಣೆಗೆ ಯೋಗದಲ್ಲಿರುವ 6 ತತ್ವಗಳನ್ನು ರೂಢಿಸಿಕೊಳ್ಳಬೇಕು. ಇತ್ತೀಚೆಗೆ ಮೈದಾ ಹಿಟ್ಟಿನಿಂದ ತಯಾರಿಸಿದ ಆಹಾರ ಸೇವಿಸುತ್ತಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಬೊಜ್ಜು ಬರುತ್ತಿದ್ದರಿಂದ ಆರೋಗ್ಯ ಸಮಸ್ಯೆ ಕಾಡುತ್ತಿದೆ ಎಂದರು.
ಜಿಲ್ಲಾ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ಎಸ್.ವಿಜಯಕುಮಾರ ಪಾಟೀಲ್ ಶಾವಂತಗೇರಾ ಮಾತನಾಡಿ, ವಿಶ್ವ ಯೋಗ ದಿನಾಚರಣೆ ಆಚರಣೆ ಮಾಡಲು ಕೇಂದ್ರ ಸರ್ಕಾರ ಆದೇಶ ಮಾಡಿದ್ದು, ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕಳೆದ 12 ವರ್ಷದಿಂದ ಯೋಗ ಆಚರಣೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಚರಣೆ ಮಾಡಲಾಗುತ್ತಿದೆ. ಪ್ರತಿಯೊಬ್ಬರು ದಿನಂಪ್ರತಿ 15 ರಿಂದ 20 ನಿಮಿಷ ಯೋಗ ಮಾಡಿದರೆ ಆರೋಗ್ಯ ಸಮಸ್ಯೆ ಸೇರಿದಂತೆ ಮಾನಸಿಕ, ದೈಹಿಕ ಸಮಸ್ಯೆಗಳು ಬಗೆಹರಿಯಲಿವೆ. ಅಲೋಪತಿ, ಹೋಮಿ ಯೋಪತಿಗೆ ಮೆಡಿಷನ್ ಕೇವಲ ತುರ್ತು ಸಂದರ್ಭದಲ್ಲಿ ಮಾತ್ರ ಉಪಯೋಗವಾಗಲಿದೆ. ಆದರೆ, ಆಯುರ್ವೇದಿಕ್ ಮಾತ್ರ ಯಾವುದೇ ಸಂದರ್ಭದಲ್ಲಿ ಉಪಯೋಗಕ್ಕೆ ಬರಲಿದೆ ಎಂದರು.
ಶಾಲೆಯ ಮುಖ್ಯಗುರು ವೆಂಕಟೇಶ ದಿನ್ನಿ ಮಾತನಾಡಿದರು.
ನಂತರ ಜಿಲ್ಲಾ ಸೇವಾದಳದ ಸಂಯೋಜಕ ವಿದ್ಯಾಸಾಗರ ಚಿಣಮಗೇರಿ ಅವರು ಸುಮಾರು 200 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಯೋಗ ಶಿಬಿರ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಟ್ಯಾಗೋರು ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್.ಜಿ.ಕಲ್ಲಯ್ಯ ಸ್ವಾಮಿ, ಕಾಲೇಜಿನ ಪ್ರಾಚಾರ್ಯ ವೀರೇಂದ್ರ ಕುಮಾರ, ವಿಜಯವಾಣಿ ಜಾಹಿರಾತು ವಿಭಾಗದ ಜಿಲ್ಲಾ ವ್ಯವಸ್ಥಾಪಕ ಸಿದ್ರಾಮಪ್ಪ ಕಬ್ಬಿಣದ ಸೇರಿ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.