ಸಿಂಧನೂರು ತಾಲೂಕಿನ ಕುರುಕುಂದ ಗ್ರಾಮದ ಮೂರನೇ ವಾರ್ಡ್‌ಮತ್ತು ಜನತಾ ಕಾಲನಿಯ ಮಹಿಳೆಯರು ಕುಡಿವ ನೀರಿನ ಸಮಸ್ಯೆ ಪರಿಹರಿಸಬೇಕೆಂದು ಶಾಸಕ ಆರ್.ಬಸನಗೌಡ ತುರ್ವಿಹಾಳ ಅವರನ್ನು ಒತ್ತಾಯಿಸಿದರು.
ಸಿಂಧನೂರು: ತಾಲೂಕಿನ ಕುರುಕುಂದ ಗ್ರಾಮದ ಮೂರನೇ ವಾರ್ಡ್ ಹಾಗೂ ಜನತಾ ಕಾಲನಿಗೆ ಗ್ರಾಪಂ ಸಮರ್ಪಕ ಕುಡಿವ ನೀರು ಪೂರೈಸುತ್ತಿಲ್ಲವೆಂದು ಮಹಿಳೆಯರು ಭಾನುವಾರ ಶಾಸಕ ಆರ್.ಬಸನಗೌಡ ತುರ್ವಿಹಾಳ ಮುಂದೆ ಆಕ್ರೋಶ ವ್ಯಕ್ತಪಡಿಸಿದರು.
ಮಾರ್ಚ್ ಆರಂಭದಲ್ಲಿಯೇ ಕುಡಿವ ನೀರಿನ ಸಮಸ್ಯೆ ಉದ್ಭವಿಸಿದೆ. ಗ್ರಾಪಂ ಗಮನಕ್ಕೆ ತಂದರೂ ಕ್ರಮಕೈಗೊಂಡಿಲ್ಲ. ಇನ್ನೂ ಏಪ್ರಿಲ್‌ನಲ್ಲಿ ನೀರಿನ ಸಮಸ್ಯೆ ಹೆಚ್ಚಲಿದೆ. ಸಮರ್ಪಕ ಕುಡಿವ ನೀರು ಪೂರೈಸದ ಕಾರಣ ಹಳ್ಳದಿಂದ ತರುವ ಪರಿಸ್ಥಿತಿ ಇದೆ.
ಈ ಬಗ್ಗೆ ಶಾಸಕರು ಅಗತ್ಯ ಕ್ರಮಕೈಗೊಂಡು ಕುಡಿವ ನೀರಿನ ಸಮಸ್ಯೆ ಪರಿಹರಿಸಬೇಕು. ಇಲ್ಲವಾದರೆ ಗ್ರಾಪಂ ಮುಂದೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು. ಶಾಸಕರು ಪ್ರತಿಕ್ರಿಯಿಸಿ, ಆದಷ್ಟು ಬೇಗ ಕುಡಿವ ನೀರಿನ ಸಮಸ್ಯೆ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.