

ಅರಕೇರಾ: ತಾಲೂಕಿನ ಕೆರೆಗಳಿಗೆ ನೀರು ತುಂಬಿಸಿ ಜನ ಹಾಗೂ ಜಾನುವಾರುಗಳಿಗೆ ಅನುಕೂಲ ಕಲ್ಪಿಸಬೇಕೆಂದು ಒತ್ತಾಯಿಸಿ ಚಿಕ್ಕಹೊನ್ನಕುಣಿಯಲ್ಲಿ ಕೆಬಿಜೆಎನ್‌ಎಲ್ ಜೆಇ ಗೀತಾಗೆ ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ವಿಭಾಗದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ತಾಲೂಕು ಅಧ್ಯಕ್ಷ ಗೋವಿಂದ ಚವ್ಹಾಣ್ ಮಾತನಾಡಿ, ಸಮರ್ಪಕ ಮಳೆಯಾಗದ ಹಿನ್ನೆಲೆಯಲ್ಲಿ ಬಹುತೇಕ ಕೆರೆಗಳು ಹಾಗೂ ಇತರ ಜಲಮೂಲಗಳು ಬತ್ತಿದ್ದು, ಜನರು-ಜಾನುವಾರುಗಳಿಗೆ ಕುಡಿಯುವ ನೀರಿನ ತೀವ್ರ ಕೊರತೆಯಾಗಿದೆ. ಜನರು ಕೃಷಿ ಹಾಗೂ ಪಶುಸಂಗೋಪನೆಯನ್ನೇ ಜೀವನದ ಆಧಾರವಾಗಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಕೆರೆಗಳಿಗೆ ನೀರು ತುಂಬಿಸುವುದು ಅಗತ್ಯವಾಗಿದೆ ಎಂದರು.