ವಿಜಯವಾಣಿ ಸುದ್ದಿಜಾಲ ಸಿಂಧನೂರು
ತಾಲೂಕು ವ್ಯಾಪ್ತಿಯ ತುಂಗಭದ್ರಾ ಎಡದಂಡೆ ಉಪಕಾಲುವೆಗಳನ್ನು ಹಂತ ಹಂತವಾಗಿ ಬಂದ್ ಮಾಡಿ, ಟೇಲೆಂಡ್ ಭಾಗಕ್ಕೆ ನೀರು ಹರಿಸುವ ಜಿಲ್ಲಾಡಳಿತದ ಕ್ರಮ ವಿರೋಧಿಸಿ 36ನೇ ಉಪಕಾಲುವೆ ಬಳಿ ಶಾಸಕ ಹಂಪನಗೌಡ ಬಾದರ್ಲಿ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಮಾಜಿ ಸಚಿವ ವೆಂಕಟರಾವ ನಾಡಗೌಡ ನೇತೃತ್ವದಲ್ಲಿ ರೈತರು ಧರಣಿ ನಡೆಸಿದರು.
ಬೆಳೆಗಳಿಗೆ ನೀರಿನ ಅಗತ್ಯ ಇರುವಾಗ ಕಾಲುವೆಯಲ್ಲಿ ನೀರು ಪೂರೈಕೆ ಸ್ಥಗಿತ ಮಾಡುವ ನಿರ್ಧಾರ ಸರಿಯಲ್ಲ. ಈ ಕುರಿತು ತೀರ್ಮಾನ ಕೈಗೊಳ್ಳುವ ಮುನ್ನ ರೈತರ ಹಿತಾಸಕ್ತಿ ಪರಿಗಣಿಸಬೇಕಿತ್ತು. ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆ ನಿರ್ಣಯದಂತೆ ಸಿಂಧನೂರು ವ್ಯಾಪ್ತಿಯ ಕಾಲುವೆಗಳಿಗೆ ನೀರು ಹರಿಸಬೇಕು. ನೀರು ಪೂರೈಕೆ ಸ್ಥಗಿತ ಮಾಡುವುದಾದರೆ ಕೊಪ್ಪಳ ಜಿಲ್ಲೆಯಿಂದಲೇ ಈ ಕುರಿತು ಕ್ರಮವಹಿಸಬೇಕು. ನೀರು ಹಂಚಿಕೆಯಲ್ಲಿ ತಾರತಮ್ಯವಾಗದಂತೆ ಕ್ರಮ ಕೈಗೊಳ್ಳಬೇಕೆಂದು ರೈತರು ಪಟ್ಟು ಹಿಡಿದರು.
ಲಿಂಗಸುಗೂರು ಸಹಾಯಕ ಆಯುಕ್ತ ನಾಗೇಂದ್ರಬಾಬು ಕುಮಾರ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು. ಪ್ರತಿಭಟನೆ ಹಿಂಪಡೆಯುವಂತೆ ಮನವೊಲಿಸಲು ಪ್ರಯತ್ನಿಸಿದರೂ ನಾಯಕರು ಹಾಗೂ ರೈತರು ಹೋರಾಟ ಮುಂದುವರಿಸಿದರು.
ನೀರಿನ ಲಭ್ಯತೆ, ಕಾಲುವೆಗಳಲ್ಲಿನ ಹರಿವು ಹಾಗೂ ರೈತರ ಬೆಳೆಗಳ ಸ್ಥಿತಿಗತಿಗಳ ಕುರಿತು ಸಮಗ್ರವಾಗಿ ಚರ್ಚೆ ನಡೆಸಲು ತುರ್ತಾಗಿ ನೀರಾವರಿ ಸಲಹಾ ಸಮಿತಿ ಸಭೆ ಕರೆಯಬೇಕು. ರೈತರು ಹಾಗೂ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ನೀರು ಹಂಚಿಕೆ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಬೇಕು. ತಾಲೂಕಿನ ಉಪಕಾಲುವೆಗಳಲ್ಲಿ ಯಾವುದೇ ಕಾರಣಕ್ಕೂ ನೀರು ಬಂದ್ ಮಾಡಲು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಬೆಳಗ್ಗೆ 6ಗಂಟೆಯಿಂದಲೇ ರೈತರು 36ನೇ ಉಪಕಾಲುವೆ ಬಳಿ ಬಂದು ಧರಣಿ ಆರಂಭಿಸಿದರು. ಕೆಲ ರೈತರು ಭಜನೆ ಪದಗಳನ್ನು ಹಾಡಿದರು. ಸುಡಾ ಅಧ್ಯಕ್ಷ ಬಾಬುಗೌಡ ಬಾದರ್ಲಿ ಮತಿತರರು ರೈತರಿಗೆ ಸಾಥ್ ನೀಡಿದರು. ತಹಸೀಲ್ದಾರ್ ಅರುಣ್ ಕುಮಾರ್, ಡಿವೈಎಸ್ಪಿ ಚಂದ್ರಶೇಖರ, ಸಿಪಿಐ ವಿನಾಯಕ, ನಗರಸಭೆ ಪೌರಾಯುಕ್ತ ಪಾಂಡುರಂಗ ಇಟಗಿ, ನೀರಾವರಿ ಅಧಿಕಾರಿಗಳಾದ ಸತ್ಯನಾರಾಯಣ, ದಾವೂದ್ ಸ್ಥಳಕ್ಕೆ ಭೇಟಿ ನೀಡಿದ್ದರು.