ಎನ್‌ಆರ್‌ಬಿಸಿಗೆ ಜಲ ಜನ-ಜಾನುವಾರುಗಳಿಗೆ ಆಸರೆ

ಗೌಡೂರು ಗ್ರಾಮದಲ್ಲಿ ಹಾದು ಹೋಗಿರುವ  ಎನ್‌ಆರ್‌ಬಿಸಿಗೆ 300 ಕ್ಯೂಸೆಕ್ ನೀರು ಹರಿಸಿರುವುದು.
ಗೌಡೂರು ಗ್ರಾಮದಲ್ಲಿ ಹಾದು ಹೋಗಿರುವ ಎನ್‌ಆರ್‌ಬಿಸಿಗೆ 300 ಕ್ಯೂಸೆಕ್ ನೀರು ಹರಿಸಿರುವುದು.
Published on
ಹಟ್ಟಿಚಿನ್ನದಗಣಿ: ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಕುಡಿವ ನೀರಿಗಾಗಿ ಗ್ರಾಮೀಣ ಭಾಗದ ಜನ-ಜಾನುವಾರುಗಳು ಪರದಾಡುವಂತಾಗಿದೆ. ಈ ನಡುವೆ ನಾರಾಯಣಪುರ ಬಲದಂಡೆ ಕಾಲುವೆ (ಎನ್‌ಆರ್‌ಬಿಸಿ)ಗೆ 300 ಕ್ಯೂಸೆಕ್ ನೀರು ಹರಿಸಿರುತ್ತಿರುವುದು ನಿಟ್ಟುಸಿರು ಬಿಡುವಂತಾಗಿದೆ.
ಭಾನುವಾರ ರಾತ್ರಿಯಿಂದ ಕಾಲುವೆಗೆ ನೀರು ಬಿಟ್ಟಿದ್ದು, ಕೋಠಾ, ಗೌಡೂರು, ಮಾಚನೂರು, ಬಂಡೇಭಾವಿ, ಹೊಸಗುಡ್ಡ, ಬೆಂಚಲದೊಡ್ಡಿ ತಾಂಡಾ ಸೇರಿದಂತೆ ಸುತ್ತ್ತಲಿನ ಅನೇಕ ಗ್ರಾಮಗಳ ಜನರಿಗೆ ಅನುಕೂಲವಾಗಿದೆ. ಕೆರೆಗಳನ್ನು ತುಂಬಿಸಲಾಗುತ್ತಿದ್ದು, ಕುಡಿವ ನೀರಿನ ಸಮಸ್ಯೆ ಸ್ವಲ್ಪ ಮಟ್ಟಿಗೆ ನೀಗುವುದರ ಜತೆಗೆ ಬೋರ್‌ವೆಲ್‌ಗಳು ರೀಚಾರ್ಜ್ ಆಗುವ ನಿರೀಕ್ಷೆ ಮೂಡಿದೆ.
ಮಳೆಗಾಲದಲ್ಲಿಯೂ ಗುರುಗುಂಟಾ ಹೋಬಳಿ ವ್ಯಾಪ್ತಿಯ ಹಲವಾರು ಗ್ರಾಮಗಳಲ್ಲಿ ಅಂತರ್ಜಲಮಟ್ಟ ತೀವ್ರವಾಗಿ ಕುಸಿದಿದೆ. ಕೊಳವೆಬಾವಿಗಳು ಹಾಗೂ ಬಾವಿಗಳು ಬತ್ತಿ ಕುಡಿವ ನೀರಿನ ತೀವ್ರ ಅಭಾವ ಎದುರಾಗಿದೆ. ಜನರು ಮತ್ತು ಜಾನುವಾರುಗಳು ನೀರಿಗಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಜನಪ್ರತಿನಿಧಿಗಳು ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳ ಸಮನ್ವಯದೊಂದಿಗೆ ಎನ್‌ಆರ್‌ಬಿಸಿ ಮುಖ್ಯ ಕಾಲುವೆಗೆ 300 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಇದರಿಂದ ಕಾಲುವೆ ಪಕ್ಕದ ಗ್ರಾಮಗಳಲ್ಲಿ ಆಶಾಭಾವ ಮೂಡಿದ್ದು, ಜನ ಜಾನುವಾರುಗಳಿಗೂ ಕುಡಿಯುವ ನೀರಿನ ಸಮಸ್ಯೆ ತಾತ್ಕಾಲಿಕವಾಗಿ ನಿವಾರಣೆಯಾಗುವ ನಿರೀಕ್ಷೆ ಇದೆ. ಆದರೆ, ಕೇವಲ ಕೆಲ ದಿನಗಳಷ್ಟೇ ನೀರು ಹರಿಸಿದರೆ ಸಾಕಾಗುವುದಿಲ್ಲ. ಮಳೆ ಸಮರ್ಪಕವಾಗಿ ಸುರಿಯುವವರೆಗೆ ಕಾಲುವೆಗೆ ನಿರಂತರವಾಗಿ ನೀರು ಹರಿಸಿದರೆ ಮಾತ್ರ ರೈತರು ಮತ್ತು ಗ್ರಾಮೀಣ ಜನರ ಸಂಕಷ್ಟಕ್ಕೆ ನಿಜವಾದ ಪರಿಹಾರ ದೊರೆಯಲಿದೆ ಎಂಬ ಒತ್ತಾಯ ಕೇಳಿಂದಿದೆ.
ಜಾನುವಾರುಗಳಿಗೆ ನೀರು ಒದಗಿಸುವುದೇ ದೊಡ್ಡ ಸವಾಲಾಗಿತ್ತು. ಈಗ ಕಾಲುವೆಯಲ್ಲಿ ನೀರು ಹರಿದಿರುವುದರಿಂದ ಕೆರೆ-ಕಟ್ಟೆಗಳು ತುಂಬಲಾರಂಭಿಸಿವೆ. ಸರ್ಕಾರ ರೈತರ ಪರಿಸ್ಥಿತಿಯನ್ನು ಗಮನಿಸಿ ಇನ್ನೂ ಕೆಲವು ದಿನಗಳ ಕಾಲ ನಿರಂತರವಾಗಿ ನೀರು ಹರಿಸಬೇಕು.
ರವಿ ಕುಮಾರ ಗೌಡೂರು ನಿವಾಸಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net