ಸಿರವಾರ: ಕಾಲುವೆ ಸ್ಥಿತಿ, ನೀರಿನ ಲಭ್ಯತೆ, ರೈತರ ಸಮಸ್ಯೆಗಳನ್ನು ಆಧರಿಸಿ ನಾಲೆಗೆ ನೀರು ಹರಿಸುವ ಕುರಿತು ಐಸಿಸಿ ಸಭೆಯಲ್ಲಿ ಚರ್ಚಿಸಲಾಗುವುದು. ರೈತರ ಅನುಕೂಲಕ್ಕೆ ಅನುಗುಣವಾಗಿ ನೀರು ಹರಿಸಲು ಪ್ರಯತ್ನಿಸಲಾಗುವುದು ಎಂದು ಎಂಎಲ್ಸಿ ಎನ್.ಎಸ್.ಬೋಸರಾಜು ಹೇಳಿದರು.
ಐಸಿಸಿ ಸಭೆ ಆ.11ರಂದು ನಡೆಯಲಿರುವ ಹಿನ್ನೆಲೆಯಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಎಡದಂಡೆ ನಾಲೆ ಸ್ಥಿತಿಗತಿ ಪರಿಶೀಲಿಸಿ ಭಾನುವಾರ ಮಾತನಾಡಿದರು. 105.788 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ತುಂಗಭದ್ರಾ ಜಲಾಶಯದಲ್ಲಿ ಈ ವಾರದಲ್ಲಿ 80 ಟಿಎಂಸಿ ನೀರು ಸಂಗ್ರಹವಾಗುವ ಬಗ್ಗೆ ಅಂದಾಜಿಸಲಾಗಿದೆ. ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಇದರಿಂದಾಗಿ ಮೊದಲ ಬೆಳೆಗೆ ನೀರು ಲಭ್ಯವಾಗುವ ವಿಶ್ವಾಸ ಮೂಡಿದೆ ಎಂದರು.
ಸಿರವಾರ ಹಾಗೂ ಮಾನ್ವಿ ಭಾಗದಲ್ಲಿನ ನಾಲೆ ಕೊನೆಯ ಪ್ರದೇಶ ಜಮೀನಿಗೆ ಸಮರ್ಪಕವಾಗಿ ನೀರು ತಲುಪಿಸುವುದು ನಮ್ಮ ಜವಾಬ್ದಾರಿಯಾಗಿದೆ. ಕಾಲುವೆ ದುರಸ್ತಿ, ಜಂಗಲ್ ಕಟಿಂಗ್ ಸೇರಿದಂತೆ ಅಗತ್ಯ ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಶಾಸಕ ಹಂಪಯ್ಯ ನಾಯಕ, ನೀರಾವರಿ ಇಲಾಖೆ ಇಇ ಕೋದಂಡರಾಮ, ಎಇಇ ವಿಜಯಲಕ್ಷ್ಮೀ, ಪಪಂ ಅಧ್ಯಕ್ಷ ಹಾಜಿ ಚೌದ್ರಿ, ಮಾಜಿ ಅಧ್ಯಕ್ಷ ವೈ.ಭೂಪನಗೌಡ, ಪ್ರಮುಖರಾದ ಸೂಗಪ್ಪ ಚುಕ್ಕಿ ಸಾಹುಕಾರ, ಶರಣಯ್ಯ ನಾಯಕ ಗುಡದಿನ್ನಿ, ಶ್ರೀನಿವಾಸ್, ಜಿಪಂ ಮಾಜಿ ಸದಸ್ಯ ಕಿರಲಿಂಗಪ್ಪ, ಶಿವಣ್ಣ ವಕೀಲ, ನಾಗಪ್ಪ ನವಲಕಲ್, ಗಂಗಣ್ಣ ದಿನ್ನಿ ಇತರರಿದ್ದರು.