ಮಾನ್ವಿ ತಾಲೂಕಿನ ಚೀಕಲಪರ್ವಿ ಮಠದಲ್ಲಿ ಶುಕ್ರವಾರ ಲಿಂ.ವಿರೂಪಾಕ್ಷ ಶ್ರೀಗಳ ಪುಣ್ಯಸ್ಮರಣೋತ್ಸವ ಅಂಗವಾಗಿ ಕರ್ತೃ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಯದ್ದಲದೊಡ್ಡಿ ಮಹಾಲಿಂಗ ಶ್ರೀಗಳು, ಮುನವಳ್ಳಿ ಮಠದ ಮುರುಗೇಂದ್ರ ಶ್ರೀಗಳು ಇದ್ದರು.
ಮಾನ್ವಿ: ಚೀಕಲಪರ್ವಿ ರುದ್ರಮುನೀಶ್ವರ ಶ್ರೀಮಠದ ಲಿಂ.ವಿರೂಪಾಕ್ಷ ಸ್ವಾಮಿಗಳು ಸರ್ಕಾರದ ನೆರವು ಪಡೆಯದೆ ಭಕ್ತರ ಹಣದಲ್ಲಿ ಮಠದ ಅಭಿವೃದ್ಧಿ ಮಾಡಿ, ಆಚರಣೆಯಲ್ಲಿ ನೇರ ನಿಷ್ಠುರುವಾದಿ ಆಗಿದ್ದರು ಎಂದು ಹಾಲ್ವಿ ಚರಣಗಿರಿ ಸಂಸ್ಥಾನ ಮಠದ ಅಭಿನವ ಮಹಾಂತ ಶ್ರೀಗಳು ಹೇಳಿದರು.
ತಾಲೂಕಿನ ಚೀಕಲಪರ್ವಿ ಗ್ರಾಮದ ರುದ್ರಮುನೀಶ್ವರ ಮಠದಲ್ಲಿ ಶುಕ್ರವಾರ ಲಿಂ.ವಿರೂಪಾಕ್ಷ ಸ್ವಾಮಿಗಳ 12ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಪೂಜ್ಯರ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಯಾರೇ ಮಠಕ್ಕೆ ಬರಲಿ ಅವರಿಗೆ ಪ್ರಸಾದ ನೀಡಿ ಕಳಿಸುತ್ತಿದ್ದರು. ತ್ರಿವಿಧ ದಾಸೋಹಿಗಳಾದ ಶ್ರೀಗಳು ಭಕ್ತರು ತಪ್ಪು ಮಾಡಿದರೆ ಅವರನ್ನು ಸರಿದಾರಿಗೆ ತರುತ್ತಿದ್ದರು ಎಂದರು.
ಪುಣ್ಯಸ್ಮರಣೆ ಅಂಗವಾಗಿ ವಿರೂಪಾಕ್ಷ ಶ್ರೀಗಳು ಹಾಗೂ ರುದ್ರಮುನೀಶ್ವರ ಸ್ವಾಮಿಗಳ ಕರ್ತೃಗದ್ದುಗೆಗೆ ರುದ್ರಾಭಿಷೇಕ, ಮಹಾಮಂಗಳಾರತಿ ಹಾಗೂ ಭಕ್ತರಿಗೆ ಅನ್ನದಾಸೋಹ ನೆರವೇರಿಸಲಾಯಿತು.
ಯದ್ದಲದೊಡ್ಡಿ ಸುವರ್ಣಗಿರಿ ಸಂಸ್ಥಾನ ಮಠದ ಮಹಾಲಿಂಗ ಶ್ರೀಗಳು, ಮುನವಳ್ಳಿ ಮಠದ ಮುರುಗೇಂದ್ರ ಶ್ರೀಗಳು, ಬಳಗಾನೂರು ಮರಿಶಿವಯೋಗಿಗಳ ಮಠದ ಸಿದ್ಧಬಸವ ಸ್ವಾಮಿಗಳು, ಮೈಸೂರಿನ ನಿರಂಜನ ದೇವರು, ಅರಳಹಳ್ಳಿ ಮಠದ ಶರಣಬಸವ ದೇವರು ಇತರರಿದ್ದರು.