

ಲಿಂಗಸುಗೂರು: ಕೃಷಿ ಪರಿಕರಗಳ ಅಕ್ರಮ ದಾಸ್ತಾನು, ಕಾಳಸಂತೆಯಲ್ಲಿ ಮಾರಾಟಕ್ಕೆ ಸಂಬಂಧಿಸಿದಂತೆ ತಾಲೂಕು ರೈತಸಂಘದ ಅಧ್ಯಕ್ಷ ಶಿವಪುತ್ರಗೌಡ ನಂದಿಹಾಳ ದೂರಿನ ಮೇರೆಗೆ ಲೋಕಾಯುಕ್ತ ಅಧಿಕಾರಿಗಳು ಕೃಷಿ ಉಪ ನಿರ್ದೇಶಕರ ಕಚೇರಿಯಲ್ಲಿ ವಿಚಾರಣೆ ನಡೆಸಿದರು.
2022-23ನೇ ಸಾಲಿನಲ್ಲಿ ಕೃಷಿ ಇಲಾಖೆ ಉಪ ನಿರ್ದೇಶಕರಾಗಿದ್ದ ಎನ್.ಸರಸ್ವತಿ, ತಾಂತ್ರಿಕ ಅಧಿಕಾರಿ ಅಶೋಕ ಕಾಂಬ್ಳೆ ವಿರುದ್ಧ ನೀಡಿದ್ದ ದೂರಿನಲ್ಲಿ ಕೃಷಿ ಇಲಾಖೆ ಕೊಠಡಿಯಲ್ಲಿ ಕೃಷಿ ಪರಿಕರಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿ ಕಾಳಸಂತೆಯಲ್ಲಿ ಮಾರಾಟ ಮಾಡಲಾಗಿದೆ ಎಂದು ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ
ರಾಯಚೂರು ಲೋಕಾಯುಕ್ತ ಇನ್‌ಸ್ಪೆಕ್ಟರ್ ರವಿ ಪುರುಷೋತ್ತಮ ಹಾಗೂ ಸಿಬ್ಬಂದಿ ದೂರುದಾರ ಶಿವಪುತ್ರಗೌಡ ನಂದಿಹಾಳ ಸಮ್ಮುಖದಲ್ಲಿ ದಾಖಲೆಗಳನ್ನು ಪರಿಶೀಲಿಸಿ ಹಿಂದಿನ ಡಿಡಿ ಎನ್.ಸರಸ್ವತಿ, ತಾಂತ್ರಿಕ ಅಧಿಕಾರಿ ಅಶೋಕ ಕಾಂಬ್ಳೆ, ಸಿದ್ದಪ್ಪ ಬಾಚಿಹಾಳ ವಿಚಾರಣೆ ನಡೆಸಿದರು. ಕೃಷಿ ಉಪ ನಿರ್ದೇಶಕ ಡಾ.ಮುತ್ತುರಾಜ, ಕೃಷಿ ನಿರ್ದೇಶಕಿ ಎನ್.ವಿಜಯಾಮೂರ್ತಿ ಇದ್ದರು.