ಒಂದು ವರ್ಷದಲ್ಲಿ 208 ಪ್ರಕರಣದಲ್ಲಿ 4.02 ಕೋಟಿ ರೂ. ಮೌಲ್ಯ ವಸ್ತುಗಲು ಜಪ್ತಿ
ಕಳೆದ ಒಂದುವರೆ ವರ್ಷದಲ್ಲಿ ವಿವಿಧ ಕಳವು ಪ್ರಕರಣದಲ್ಲಿ ಕಳೆದುಕೊಂಡ ವಸ್ತುಗಳನ್ನು ಐಜಿಪಿ ಡಾ.ಹರ್ಷ ಪಿಎಸ್. ಮಾಲೀಕರಿಗೆ ಹಸ್ತಾಂತರ ಮಾಡಿದರು. ಎಸ್ಪಿ ಅರುಣಾಂಗ್ಶು ಗಿರಿ, ಎಎಸ್ಪಿ ಜಿ.ಹರೀಶ್, ಡಿವೈಎಸ್ಪಿಗಳಾದ ಈ.ಶಾಂತವೀರ, ಚಂದ್ರಶೇಖರ, ದತ್ತಾತ್ರೆಯ ಕಾರ್ನಾಡ್ ಇದ್ದರು.
-ಹೊಸ ತಂತ್ರಜ್ಞಾನಗಳ ನೆರವಿನಿಂದ ಆರೋಪಿಗಳ ಪತ್ತೆಗೆ ಸಹಕಾರಿ
- ಐಜಿಪಿ ಡಾ.ಹರ್ಷ ಪಿ.ಎಸ್. ಹೇಳಿಕೆ
ರಾಯಚೂರು ಜಿಲ್ಲೆಯಲ್ಲಿ 2025 ರ ಜನವರಿ 01 ರಿಂದ 2026ರ ಜೂನ್ 30ರವರೆಗೆ ದಾಖಲಾದ 208 ವಿವಿಧ ಕಳವು ಪ್ರಕರಣಗಳನ್ನು ಪತ್ತೆಹಚ್ಚಿ ಒಟ್ಟು 4.02 ಕೋಟಿ ರೂಮೌಲ್ಯದ ಸ್ವತ್ತುಗಳನ್ನು ನಗರದ ಪೊಲೀಸ್ ಕವಾಯತ್ತು ಮೈದಾನದಲ್ಲಿ ಬಳ್ಳಾರಿ ವಲಯದ ಪೊಲೀಸ್ ಮಹಾನಿರೀಕ್ಷಕ ಡಾ.ಹರ್ಷ ಪಿ.ಎಸ್,ಬುಧವಾರ ಕಳೆದುಕೊಂಡ ಮಾಲೀಕರಿಗೆ ಹಸ್ತಾಂತರ ಮಾಡಿದರು.
ಜಿಲ್ಲೆಯ ಮೂರು ಪೊಲೀಸ್ ವಿಭಾಗದ ಠಾಣೆಗಳಲ್ಲಿ ದಾಖಲಾದ ವಿವಿಧ ಸ್ವತ್ತು ಸಂಬಂಧಿತ ಅಪರಾಧ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ಪತ್ತೆಹಚ್ಚಿ, ಹೆಚ್ಚಿನ ಪ್ರಮಾಣದ ಕಳುವಾದ ಆಸ್ತಿಯನ್ನು ಮರು ಹಿಂಪಡೆಯುವಲ್ಲಿ ಯಶಸ್ವಿಯಾಗಿದ್ದು, ಸೈಬರ್ ಅಪರಾಧ ಪ್ರಕರಣಗಳಲ್ಲಿ 42 ಲಕ್ಷ ರೂ. ಮೊತ್ತವನ್ನು ಪತ್ತೆಹಚ್ಚಿ ದೂರುದಾರರಿಗೆ ಹಿಂದಿರುಗಿಸಲಾಗಿದೆ. ಸಿಇಐಆರ್ ಪೋರ್ಟಲ್ ಮೂಲಕ 2,572 ಮೊಬೈಲ್ ಫೋನ್‌ಗಳನ್ನು ಪತ್ತೆಹಚ್ಚಲಾಗಿದೆ. 1,651.25 ಗ್ರಾಂ ಚಿನ್ನದ ಆಭರಣಗಳು,
3,568.07 ಗ್ರಾಂ ಬೆಳ್ಳಿ ಆಭರಣಗಳು, 35,40,940 ನಗದು, ಟ್ರಾಕ್ಟರ್,ಜೀಪ್ 77 ದ್ವಿಚಕ್ರ ವಾಹನಗಳು ಹಾಗೂ ಲ್ಯಾಪ್ಟಾಪ್, ಮೊಬೈಲ್ ಫೋನ್, ಕಾಪರ್‌ವೈರ್, ಬ್ಯಾಟರಿ ಸೇರಿದಂತೆ ವಿವಿಧ ವಸ್ತುಗಳನ್ನು ವಶಪಡಿಸಿಕೊಂಡು ಮಾಲೀಕರಿಗೆ ಹಸ್ತಾಂತರ ಮಾಡಿದರು.
ನಂತರ ಪೊಲೀಸ್ ಮಹಾನಿರೀಕ್ಷಕ ಡಾ.ಹರ್ಷ ಪಿ.ಎಸ್, ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಇತ್ತಿಚ್ಚಿನ ದಿನಗಳಲ್ಲಿ ಅಂತರರಾಜ್ಯದಿಂದ ಬಂದು ಕಳ್ಳತನ ಮತ್ತು ದರೋಡೆ ನಡೆಸುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ, ವಿವಿಧ ರಾಜ್ಯಗಳ ಪೊಲೀಸರೊಂದಿಗೆ ಸಮನ್ವಯ ಸಾಧಿಸಿ ಆರೋಪಿಗಳನ್ನು ಬಂಧಿಸುವ ಕಾರ್ಯವನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲಾಗುತ್ತಿದೆ. ಹೊಸ ತಂತ್ರಜ್ಞಾನಗಳ ನೆರವಿನಿಂದ ಆರೋಪಿಗಳ ಬೆರಳಚ್ಚುಗಳನ್ನು ಪರಿಶೀಲಿಸಿ, ದೇಶದ ಯಾವ ಭಾಗದಲ್ಲಿ ಅವರು ಅಪರಾಧ ಎಸಗಿದ್ದಾರೆ ಎಂಬ ಸಂಪೂರ್ಣ ಮಾಹಿತಿ ಪಡೆಯಲು ಸಾಧ್ಯವಾಗುತ್ತಿದೆ. ಇದರಿಂದ ಆರೋಪಿಗಳನ್ನು ಶೀಘ್ರವಾಗಿ ಪತ್ತೆಹಚ್ಚಲು ಅನುಕೂಲವಾಗುತ್ತಿದೆ ಎಂದು ತಿಳಿಸಿದರು.
ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ವಿಶೇಷ ತನಿಖಾ ವ್ಯವಸ್ಥೆಯನ್ನು ಬಲಪಡಿಸಲಾಗುತ್ತಿದ್ದು, ಮನೆ ಕಳ್ಳತನ, ಸೈಬರ್ ವಂಚನೆ ಸೇರಿದಂತೆ ವಿವಿಧ ಪ್ರಕರಣಗಳನ್ನು ತ್ವರಿತವಾಗಿ ಪತ್ತೆಹಚ್ಚುವ ನಿಟ್ಟಿನಲ್ಲಿ ಹೊಸ ಕ್ರಮಗಳನ್ನು ಜಾರಿಗೊಳಿಸಲಾಗಿದೆ ಎಂದರು. ಅಂತರರಾಜ್ಯ ದರೋಡೆಕೋರರು ರಾಜ್ಯಕ್ಕೆ ಬಂದು ಅಪರಾಧ ಎಸಗಿ, ಕಳುವಾದ ವಾಹನಗಳನ್ನು ಬೇರೆ ರಾಜ್ಯಗಳಲ್ಲಿ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಸಾರ್ವಜನಿಕರು ಕಡಿಮೆ ಬೆಲೆಗೆ ವಾಹನ ಖರೀದಿಸುವ ಮುನ್ನ ಅದರ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಬೇಕು. ಅನುಮಾನಾಸ್ಪದ ವಾಹನಗಳ ಬಗ್ಗೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಗು ಗಿರಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ. ಹರೀಶ, ಡಿವೈಎಸ್‌ಪಿ ಶಾಂತವೀರ, ಡಿಎಸ್‌ಪಿ ದತ್ತಾತ್ರೇಯ, ಚಂದ್ರಶೇಖರ, ಸಿಪಿಐ ಸಿಂಗಪ್ಪ, ಸಾಬಣ್ಣನಾಯಕ ಸೇರಿದಂತೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಎಸ್ಪಿ ಅರುಣಾಂಗ್ಶು ಗಿರಿ, ಎಎಸ್ಪಿ ಜಿ.ಹರೀಶ್, ಡಿವೈಎಸ್ಪಿಗಳಾದ ಈ.ಶಾಂತವೀರ, ಚಂದ್ರಶೇಖರ, ದತ್ತಾತ್ರೆಯ ಕಾರ್ನಾಡ್ ಸೇರಿ ಅನೇಕರು ಇದ್ದರು.