ಕುರುಕುಂದ ಗ್ರಾಮದಲ್ಲಿ ಅನೈರ್ಮಲ್ಯ ತಾಂಡವ

ಧನೂರು ತಾಲೂಕಿನ ಕುರುಕುಂದ ಗ್ರಾಮದಲ್ಲಿ ಚರಂಡಿಯಲ್ಲಿ ಹೂಳು ತುಂಬಿರುವುದು.
ಧನೂರು ತಾಲೂಕಿನ ಕುರುಕುಂದ ಗ್ರಾಮದಲ್ಲಿ ಚರಂಡಿಯಲ್ಲಿ ಹೂಳು ತುಂಬಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಚರಂಡಿಗಳ ಹೂಳು ತೆರವಿಗೆ ಮುಂದಾಗದ ಗ್ರಾಪಂ
  • ಜನರಿಗೆ ಅನಾರೋಗ್ಯ ಭೀತಿ
ಸಿಂಧನೂರು: ತಾಲೂಕಿನ ಕುರುಕುಂದ ಗ್ರಾಮದಲ್ಲಿ ಚರಂಡಿಗಳು ಹೂಳಿನಿಂದ ತುಂಬಿದ್ದು, ಕಲುಷಿತ ನೀರು ರಸ್ತೆ ಮೇಲೆ ಹರಿಯುತ್ತಿದೆ. ಇದರಿಂದ ಜನರು ಸಂಚಾರಕ್ಕೆ ಅಡಚಣೆ ಜತೆಗೆ ಸಾಂಕ್ರಾಮಿಕ ರೋಗದ ಭೀತಿ ಎದುರಿಸುವಂತಾಗಿದೆ. 
ಗ್ರಾಮದ ಮುಖ್ಯ ಚರಂಡಿ, ವಿವಿಧ ವಾರ್ಡ್‌ಗಳಲ್ಲಿ ವಿವಿಧ ಅನುದಾದಡಿ ನಿರ್ಮಿಸಿದ ಚರಂಡಿ ಕಲ್ಲುಗಳು ಕಿತ್ತು ಹೋಗಿದ್ದು, ಕಸ- ಕಡ್ಡಿಯಿಂದ ತುಂಬಿವೆ. ಅಲ್ಲದೆ ಹೂಳು ತುಂಬಿ ಗಬ್ಬು ನಾರುತ್ತಿವೆ. ನಿವಾಸಿಗಳು ದುರ್ನಾತದ ಜತೆಗೆ ಸೊಳ್ಳೆಗಳ ಕಾಟಕ್ಕೆ ಬೇಸತ್ತಿದ್ದಾರೆ. ರಾತ್ರಿ ಸೊಳ್ಳೆ ಪರದೆ ಇಲ್ಲದೆ ಮಲಗಲಾರದಂತಹ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮ ಪಂಚಾಯಿತಿಯವರು ಚರಂಡಿ ಸ್ವಚ್ಛ ಮಾಡಿ ವರ್ಷವೇ ಗತಿಸಿದೆ. ಬಳಕೆ ಮಾಡಿದ ನೀರು ಚರಂಡಿಯಿಂದ ಮುಖ್ಯ ರಸ್ತೆಗೆ ಹರಿತಯುತ್ತಿದ್ದು, ಸಾಂಕ್ರಾಮಿಕ ರೋಗ ಹರಡುವ ಭಯ ಆವರಿಸಿದೆ. 
ಐದು ಸಾವಿರ ಜನಸಂಖ್ಯೆ: ತಿಡಿಗೋಳ ಗ್ರಾಪಂ ವ್ಯಾಪ್ತಿಗೆ ಒಳಪಡುವ ಕುರುಕುಂದ ಗ್ರಾಮದಲ್ಲಿ ಮೂರು ವಾರ್ಡ್‌ಗಳಿದ್ದು, 5 ಸಾವಿರ ಜನಸಂಖ್ಯೆ ಇದೆ. ಸಿಸಿ ರಸ್ತೆ ಕಾಮಗಾರಿ ವೇಳೆ ಚರಂಡಿ ನಿರ್ಮಾಣ ಮಾಡಿಲ್ಲ. ಇದರಿಂದ ಹಳೇ ಚರಂಡಿಗಳೆಲ್ಲ ಹೂಳು ತುಂಬಿರುವುದು ಸಮಸ್ಯೆಗೆ ಕಾರಣವಾಗಿದೆ. ಈ ಹಿಂದೆ ಸದಸ್ಯರೇ ಹೂಳು ತುಂಬಿದ ಚರಂಡಿಗಳನ್ನು ಸ್ವಚ್ಛ ಮಾಡಿಸುತ್ತಿದ್ದರು. ಈಗ ಗ್ರಾಪಂ ಆಡಳಿತ ಮುಗಿದಿದ್ದು, ಅಭಿವೃದ್ಧಿ ಕೆಲಸಗಳು ನನೆಗುದಿಗೆ ಬಿದ್ದಿವೆ. ಮಾಜಿ ಸದಸ್ಯರು ಗ್ರಾಪಂಗೆ ಮನವಿ ಮಾಡಿದರೂ ಕ್ಯಾರೇ ಎನ್ನುತ್ತಿಲ್ಲ ಎಂಬ ಆರೋಪವಿದೆ.
ಅಲ್ಲದೆ ಗ್ರಾಮದಲ್ಲಿ ಮುಖ್ಯ, ಹಳ್ಳದ ರಸ್ತೆ ಸೇರಿ ಇತರ ಮಾರ್ಗಗಳು ಅನೈರ್ಮಲ್ಯದಿಂದ ಕೂಡಿವೆ. ಸಿಂಧನೂರು ಮಾರ್ಗವಾಗಿ ತೆರಳುವ ಮುಖ್ಯರಸ್ತೆ, ಹಳ್ಳದ ರಸ್ತೆಗಳಲ್ಲಿ ಆಳೆತ್ತರದಲ್ಲಿ ತಿಪ್ಪೆಗುಂಡಿಗಳನ್ನು ಹಾಕಿದ್ದು, ತೆರವಿಗೆ  ಕ್ರಮಕೈಗೊಂಡಿಲ್ಲ. ಇದರಿಂದ ಸುತ್ತಲಿನ ಜನರ ನೆಮ್ಮದಿಯೂ ಹಾಳಾಗಿದೆ. ಚರಂಡಿಗಳ ಹೂಳು, ಸ್ವಚ್ಛತೆಗೆ ಗ್ರಾಪಂ ಮುಂದಾಗಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ. 
"

ಕುರುಕುಂದ ಗ್ರಾಮದಲ್ಲಿ ಚರಂಡಿಗಳು ಹೂಳು ತುಂಬಿ ವರ್ಷವೇ ಕಳೆದಿದ್ದು, ಸ್ವಚ್ಛತೆ ಕೈಗೊಂಡಿಲ್ಲ. ಇದರಿಂದ ಒಂದೆಡೆ ಕಲುಷಿತ ನೀರು ಶೇಖರಣೆಗೊಂಡು ಸೊಳ್ಳೆ ಉತ್ಪತ್ತಿ ಕೇಂದ್ರವಾಗಿ ಮಾರ್ಪಟ್ಟಿದ್ದು, ಜನರು ಸಾಂಕ್ರಾಮಿಕ ರೋಗ ಹರಡುವ ಭಯದಲ್ಲಿ ಜೀವನ ನಡೆಸುವಂತಾಗಿದೆ.

— ವೀರೇಶ ಕುರುಕುಂದ ನಿವಾಸಿ"

ಕುರುಕುಂದ ಗ್ರಾಮದಲ್ಲಿ ಚರಂಡಿಗಳ ಸ್ವಚ್ಛತೆಗೆ ಕ್ರಮಕೈಗೊಳ್ಳಲಾಗುವುದು. 15ನೇ ಹಣಕಾಸು ಅನುದಾನ ಇಲ್ಲದಿರುವುದರಿಂದ ಅಭಿವೃದ್ಧಿಗೆ ಸಮಸ್ಯೆಯಾಗಿದೆ. ಕಾರ್ಮಿಕರ ಕೊರತೆಯೂ ಇದೆ. ಈಗಾಗಲೇ ದೂರುಗಳು ಬಂದಿದ್ದು ಶೀಘ್ರವೇ ಪರಿಹರಿಸಲಾಗುವುದು.

— ಸಿದ್ದಪ್ಪ ಪಿಡಿಒ, ತಿಡಿಗೋಳ ಗ್ರಾಪಂ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net