ಮಟ್ಟೂರು ಗ್ರಾಮದಲ್ಲಿ ಶನಿವಾರ ಏರ್ಪಡಿಸಿದ್ದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ವಾಗ್ಮಿ ಹಾರಿಕಾ ಮಂಜುನಾಥ ದಿಕ್ಸೂಚಿ ಭಾಷಣ ಮಾಡಿದರು. ನಂದವಾಡಗಿಯ ಅಭಿನವ ಚನ್ನಬಸವ ಸ್ವಾಮೀಜಿ, ಚಂದ್ರಶೇಖರಯ್ಯ ಸ್ವಾಮಿ ಹಿರೇಮಠ ಇದ್ದರು.
ಮುದಗಲ್: ಜಗತ್ತಿನಾದ್ಯಂತ ನೂರು ಕೋಟಿಗೂ ಹೆಚ್ಚು ಹಿಂದೂಗಳು ವಾಸವಾಗಿದ್ದಾರೆ. ಪ್ರತಿಯೊಬ್ಬರೂ ಜಾಗೃತರಾಗಿ ಧರ್ಮ ರಕ್ಷಣೆಗೆ ಮುಂದಾಗಬೇಕು ಎಂದು ವಾಗ್ಮಿ ಹಾರಿಕಾ ಮಂಜುನಾಥ ಹೇಳಿದರು.
ಸಮೀಪದ ಮಟ್ಟೂರು ಗ್ರಾಮದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಹಿಂದೂ ಸಮಾಜೋತ್ಸವ ಆಯೋಜನಾ ಸಮಿತಿಯಿಂದ ಏರ್ಪಡಿಸಿದ್ದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ತಾಯಂದಿರು ಮಕ್ಕಳಿಗೆ ಸನಾತನ ಸಂಸ್ಕೃತಿ, ಧರ್ಮ ರಕ್ಷಣೆಗಾಗಿ ರಾಮಾಯಣ , ಮಹಾಭಾರತ , ಭಗವದ್ಗೀತೆಯಂತಹ ಗ್ರಂಥಗಳ ಪರಿಚಯ ಮಾಡಿಸಬೇಕು. ಉತ್ತಮ ಸಂಸ್ಕಾರ ನೀಡುವ ಗುರುತರ ಜವಾಬ್ದಾರಿ ತಾಯಂದಿರ ಮೇಲಿದೆ ಎಂದರು.
ಜಾಗೃತಿ ಕೊರತೆಯಿಂದ ಹಿಂದೂ ಧರ್ಮದ ರಕ್ಷಣೆಗೆ ಹಿನ್ನಡೆಯಾಗಿದ್ದು, ಪ್ರತಿ ಮನೆಯಲ್ಲಿಯೂ ಹಿಂದೂಗಳು ಸಂಘಟಿತರಾಗಬೇಕು. ಪ್ರತಿ ಗ್ರಾಮ, ಹೃದಯಕ್ಕೂ ಹಿಂದೂಗಳ ಸಂದೇಶ ಸಾರುವ ಮೂಲ ಉದ್ದೇಶದಿಂದ ಹಿಂದೂ ಸಮಾಜೋತ್ಸವ ಕಾರ್ಯಕ್ರಮ ಆಯೋಜಿಸಿದ್ದು, ನಾವೆಲ್ಲ ಹಿಂದೂ ನಾವೆಲ್ಲ ಒಂದು ಎಂಬ ಸಂಕಲ್ಪದೊಂದಿಗೆ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಸಂಘಟಿತರಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಪಟ್ಟಣ ಸೇರಿದಂತೆ ಬುದ್ದಿನ್ನಿ, ಗುಡಿಹಾಳ, ಕುಣಿಕೆಲ್ಲೂರು, ಮಿಟ್ಟಿಕೆಲ್ಲೂರು, ತೆರಿಭಾವಿ ಹಾಗೂ ವಿವಿಧೆಡೆಯಿಂದ ಯುವಕರು, ಮಹಿಳೆಯರು, ಮಕ್ಕಳು ಆಗಮಿಸಿದ್ದರು. ಮುದಗಲ್ ಪಿಎಸ್‌ಐ ವೆಂಕಟೇಶ ಮಾಡಗೇರಿ, ಮಸ್ಕಿ ಪಿಎಸ್‌ಐ ರಂಗಯ್ಯ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ತ್ ನೀಡಲಾಗಿತ್ತು.