ದೇವದುರ್ಗ: ಶಾಸಕಿ ಕರೆಮ್ಮ ಜಿ.ನಾಯಕ ಅವರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು, ಅವರ ವಿರುದ್ಧ ವಿನಾಕಾರಣ ಆರೋಪ ಮಾಡುವುದು ಸರಿಯಲ್ಲ ಎಂದು ಜೆಡಿಎಸ್ ವಕ್ತಾರ ಗೋವಿಂದರಾಜ ನಾಯಕ ಚಿಕ್ಕಗುಡ್ಡ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು ತಾಲೂಕಿಗೆ ಬಂದಾಗ ಅವರ ಜತೆಗಿದ್ದು, ಹಳ್ಳಿಗಳಿಗೆ ತೆರಳಿ ರೈತರ ಸಮಸ್ಯೆ ಆಲಿಸಿದ್ದಾರೆ. ವಿಧಾನಸಭೆ ಅಧಿವೇಶನದಲ್ಲಿ ಪ್ರತಿಸಲ ರೈತರು ಹಾಗೂ ತಾಲೂಕಿನ ಸಮಸ್ಯೆ ಬಗ್ಗೆ ಧ್ವನಿ ಎತ್ತಿದ್ದಾರೆ. ಮಾಜಿ ಸಚಿವರ ಆಡಳಿತದಲ್ಲಿ ತಾಲೂಕಿನಲ್ಲಿ ಜನರು ಮಾತನಾಡಲು ಭಯಪಡುವ ವಾತಾವರಣವಿತ್ತು.
ಆದರೆ, ಶಾಸಕಿ ಕರೆಮ್ಮ ಅವರು ಯಾರೇ ಆರೋಪ, ಟೀಕೆ ಮಾಡಿದರೂ ಮುಕ್ತವಾಗಿ ಸ್ವೀಕರಿಸುತ್ತಾರೆ. ಕ್ಷೇತ್ರದ ಅಭಿವೃದ್ಧಿಗೆ ಕೆಕೆಆರ್‌ಡಿಬಿ ಸೇರಿ ವಿವಿಧ ಇಲಾಖೆಯಿಂದ ಸಾವಿರ ಕೋಟಿ ರೂ.ಅನುದಾನ ತಂದಿದ್ದಾರೆ.
ಪಟ್ಟಣದ ಅಭಿವೃದ್ಧಿಗೆ 6 ಕೋಟಿ, ಶಾಲಾ ಕಾಲೇಜು, ಪ್ರತಿಹಳ್ಳಿಗೆ ಸಿಸಿ ರಸ್ತೆ ನಿರ್ಮಾಣಕ್ಕೆ ಅನುದಾನ ಕೊಟ್ಟಿದ್ದಾರೆ. ತಾಲೂಕಿಗೆ ಹೊಸ ಪ್ರೌಢಶಾಲೆಗಳು, ಪ್ರಾಥಮಿಕ ಆಸ್ಪತ್ರೆಗಳು, ಕೆಇಬಿ ಉಪಕೇಂದ್ರ ತಂದಿದ್ದಾರೆ. ಎಲ್ಲ ಹಳ್ಳಿ, ಎಲ್ಲ ಸಮುದಾಯಕ್ಕೂ ಅನುದಾನ ನೀಡಿದ್ದಾರೆ ಎಂದರು.