ಆಸ್ತಿಗಾಗಿ ಅಣ್ಣನ ಮಗನನ್ನೇ ಕೊಂದ ಚಿಕ್ಕಪ್ಪ

ಬಸವರಾಜ
ಬಸವರಾಜ
Published on
ಸಿಂಧನೂರು: ತಾಲೂಕಿನ ಅಲಬನೂರು ಗ್ರಾಮದಲ್ಲಿ ಬುಧವಾರ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಸ್ವಂತ ಅಣ್ಣನ ಮಗನಿಗೆ ಚಾಕುವಿನಿಂದ ಇರಿದು ಕೊಲೆಗೈದ ದುರುಳ ಚಿಕ್ಕಪ್ಪ, ಅತ್ತಿಗೆ ಹತ್ಯೆಗೂ ಯತ್ನಿಸಿದ ಘಟನೆ ನಡೆದಿದೆ.
ಗ್ರಾಮದ ನಾಗರಾಜ ಸಿದ್ದಪ್ಪ ಆಲ್ವಿ (12) ಕೊಲೆಯಾದ ಬಾಲಕ. ಈತನ ತಾಯಿ ಅಮೃತಾ ಸಿದ್ದಪ್ಪ, ಪುತ್ರ ಧನುಷ್ ಗಂಭೀರ ಗಾಯಗೊಂಡಿದ್ದಾರೆ. ಬಸವರಾಜ ರುದ್ರಪ್ಪ ಆಲ್ವಿಯೇ ಅಣ್ಣನ ಮಗನನ್ನು ಹತ್ಯೆಗೈದ ಚಿಕ್ಕಪ್ಪ.
ಘಟನೆ ವಿವರ: ಮಂಗಳವಾರ ಅಲಬನೂರಿಗೆ ಬಂದ ಬಸವರಾಜ, ಸಹೋದರ ಸಿದ್ದಪ್ಪನ ಮನೆಗೆ ಚಾಕು ಸಹಿತ ತೆರಳಿದ್ದನು. ಮನೆಯಲ್ಲಿ ಸಿದ್ದಪ್ಪನ ಹೆಂಡತಿ ಅಮೃತಾ, ಮಕ್ಕಳಾದ ನಾಗರಾಜ ಮತ್ತು ಧನುಷ್ ಇದ್ದು, ಅತ್ತಿಗೆ ಮತ್ತು ಮಕ್ಕಳಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದಾಗ ನಾಗರಾಜ ಎನ್ನುವ ಬಾಲಕ ಮೃತಪಟ್ಟಿದ್ದಾನೆ. ಅಮೃತಾ ಮತ್ತು ಧನುಷ್‌ಗೆ ಗಂಭೀರ ಗಾಯಗಳಾಗಿದ್ದು, ನಗರದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ಜಿ.ಚಂದ್ರಶೇಖರ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.
ಅಲಬನೂರು ಗ್ರಾಮದ ಚಿನ್ನಮ್ಮ-ರುದ್ರಪ್ಪ ದಂಪತಿಗೆ ಸಿದ್ದಪ್ಪ ಹಾಗೂ ಬಸವರಾಜ ಎನ್ನುವ ಪುತ್ರರಿದ್ದಾರೆ. ಸಿದ್ದಪ್ಪ ಅಲಬನೂರಿನಲ್ಲಿ, ಬಸವರಾಜ ಸಿರುಗುಪ್ಪ ತಾಲೂಕಿನ ಅಳ್ಳಿಗನೂರಿನಲ್ಲಿ ವಾಸಿಸುತ್ತಿದ್ದಾರೆ. ಇಬ್ಬರೂ ಸಹೋದರರ ನಡುವಿನ ಆಸ್ತಿ ವಿಚಾರ ಹಿರಿಯ ಸಹೋದರ ಸಿದ್ದಪ್ಪನ ಮಗ ನಾಗರಾಜನ ಸಾವಿನಲ್ಲಿ ಅಂತ್ಯಗೊಂಡಿದೆ. ಈ ಕುರಿತು ಸಿಂಧನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net