ಮೆದಕಿನಾಳ ಗ್ರಾಮದಲ್ಲಿ ಲಿಂ.ಚನ್ನಮಲ್ಲ ಶಿವಯೋಗಿಗಳ ಜಾತ್ರೋತ್ಸವ, ಸಾಮೂಹಿಕ ವಿವಾಹ ಹಾಗೂ ಉಡಿ ತುಂಬುವ ಕಾರ್ಯಕ್ರಮವನ್ನು ಸಂತೆಕೆಲ್ಲೂರಿನ ಗುರುಬಸವ ಸ್ವಾಮೀಜಿ ಉದ್ಘಾಟಿಸಿದರು. ಡಾ.ಚನ್ನಮಲ್ಲ ಸ್ವಾಮೀಜಿ, ವಾಮದೇವ ಶಿವಾಚಾರ್ಯರು, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ಡಾ.ಮಲ್ಲಿಕಾರ್ಜುನ ಕೆ, ಪಿಎಸ್‌ಐ ಕೆ.ರಂಗಯ್ಯ ಇತರರಿದ್ದರು.
ಮಸ್ಕಿ: ಕಲ್ಯಾಣ ಕರ್ನಾಟಕದ ಅನೇಕ ಶರಣ, ಸಂತರಲ್ಲಿ ಕನಕಗಿರಿ ಮತ್ತು ಮೆದಕಿನಾಳ ಸಂಸ್ಥಾನ ಮಠದ ಚನ್ನಮಲ್ಲ ಶಿವಯೋಗಿಗಳು ಮಹಾತಪಸ್ವಿ ಹಾಗೂ ತ್ರಿಕಾಲ ಪೂಜಾ ನಿಷ್ಠರಾಗಿದ್ದರು. ಹಲವು ಭಾಷಾ ಪಂಡಿತರಾಗಿದ್ದರು ಎಂದು ಸಂತೆಕೆಲ್ಲೂರು ಘನಮಠೇಶ್ವರ ಮಠದ ಪೀಠಾಧಿಪತಿ ಗುರುಬಸವ ಸ್ವಾಮೀಜಿ ಹೇಳಿದರು.
ಮೆದಕಿನಾಳ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಚನ್ನಮಲ್ಲ ಶಿವಯೋಗಿಗಳ 70ನೇ ವರ್ಷದ ಜಾತ್ರೋತ್ಸವ, ಸಾಮೂಹಿಕ ವಿವಾಹ ಹಾಗೂ 1008 ಜನ ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೈದರಾಬಾದ್ ನಿಜಾಮ ಲಿಂ.ಚನ್ನಮಲ್ಲ ಶಿವಯೋಗಿಗಳನ್ನು ಗುರುಗಳೆಂದು ಸ್ವೀಕರಿಸಿದ್ದರು. ಜತೆಗೆ ಈ ಭಾಗದಲ್ಲಿ ಜಮೀನು ಉಂಬಳಿಯಾಗಿ ದಾನ ನೀಡಿ ಧಾರ್ಮಿಕ ಕಾರ್ಯ ನಡೆಸಲು ಸಹಕರಿಸಿದ್ದರು ಎಂದು ತಿಳಿಸಿದರು.
ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಮಾತನಾಡಿ, ಗ್ರಾಮೀಣ ಭಾಗದ ಜನರಲ್ಲಿ ಶ್ರೀಮಠದ ಪೀಠಾಧಿಪತಿ ಡಾ.ಚನ್ನಮಲ್ಲ ಸ್ವಾಮೀಜಿ ಧಾರ್ಮಿಕ ಅರಿವು ಮೂಡಿಸುತ್ತಿದ್ದಾರೆ. ಸಾಮೂಹಿಕ ಉಚಿತ ವಿವಾಹ ಆಯೋಜಿಸಿ ಬಡವರಿಗೆ ಅನುಕೂಲ ಮಾಡುತ್ತಿರುವ ಮಠದ ಕಾರ್ಯ ಶಾಘ್ಲನೀಯ ಎಂದರು.