ವೈದ್ಯರ ನೇಮಕಕ್ಕೆ ಬೇಕಿದೆ ಚಿಕಿತ್ಸೆ

ಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದ ಹೊರನೋಟ.
ಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದ ಹೊರನೋಟ.
Published on

ಪ್ರಮುಖ ಮುಖ್ಯಾಂಶಗಳು

  • ಹಟ್ಟಿ ಪಿಎಚ್‌ಸಿಯಲ್ಲಿಲ್ಲ ಕಾಯಂ ಡಾಕ್ಟರ್ಸ್
  • ಹಟ್ಟಿಚಿನ್ನದಗಣಿ ಸಾರ್ವಜನಿಕರ ಪರದಾಟ
ಹಟ್ಟಿಚಿನ್ನದಗಣಿ: ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾಯಂ ವೈದ್ಯರಿಲ್ಲದೆ ಚಿಕಿತ್ಸೆಗೆ ಬರುವ ಸಾರ್ವಜನಿಕರು ಪರದಾಡುವಂತಾಗಿದೆ.
ನಲವತ್ತು ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಹಟ್ಟಿ ಪಟ್ಟಣ ಹಾಗೂ ಸುತ್ತ್ತಲಿನ ಗ್ರಾಮಗಳ ಜನರು ಅನಾರೋಗ್ಯಕ್ಕೆ ತುತ್ತಾದರೆ ಚಿಕಿತ್ಸೆಗೆ ಇದೇ ಸರ್ಕಾರಿ ಆಸ್ಪತ್ರೆಯನ್ನು ಅವಲಂಬಿಸಿದ್ದಾರೆ. ಪ್ರಸೂತಿ ವಾರ್ಡ್, ತುರ್ತು ಚಿಕಿತ್ಸಾ ವಿಭಾಗ ಮತ್ತು ಹೊರರೋಗಿಗಳ ಚಿಕಿತ್ಸಾ ಕೇಂದ್ರಗಳಿದ್ದು, ಇಲ್ಲಿ ಹೆರಿಗೆಗಳೂ ನಡೆಯುತ್ತವೆ. ಆದರೆ, ವೈದ್ಯರಿಲ್ಲದಿರುವುದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷೃಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಆಸ್ಪತ್ರೆಯಲ್ಲಿ ಏಳು ಜನ ನರ್ಸ್‌ಗಳು, ಡಿ-ಗ್ರೂಪ್ ನೌಕರರು, ಆಂಬುಲೆನ್ಸ್ ಚಾಲಕ, ಸ್ವಚ್ಛತಾ ಸಿಬ್ಬಂದಿ ಇದ್ದರೂ, ವೈದ್ಯರ ಕೊರತೆಯಿಂದ ಸೇವೆಗಳು ಸಂಪೂರ್ಣವಾಗಿ ಕುಂಠಿತಗೊಂಡಿವೆ. ವೈದ್ಯರಿಲ್ಲದೆ ಚಿಕಿತ್ಸೆ ಹೇಗೆ ಸಾಧ್ಯ?, ತುರ್ತು ಪರಿಸ್ಥಿತಿಯಲ್ಲಿ ರೋಗಿಗಳ ಜವಾಬ್ದಾರಿ ಯಾರದು ? ಎಂಬ ಪ್ರಶ್ನೆಗಳು ಸಾರ್ವಜನಿಕರದ್ದಾಗಿವೆ.
ಮೇಲಧಿಕಾರಿಗಳ ಗಮನವಿಲ್ಲ: ಆಸ್ಪತ್ರೆ ಇದ್ದರೂ ವೈದ್ಯರಿಲ್ಲ, ನಾವು ಏನು ಮಾಡಬೇಕು ? ನಮ್ಮ ಜೀವಕ್ಕೆ ಬೆಲೆ ಇಲ್ಲವೇ ? ಎಂದು ಜನರು ಅಸಹಾಯಕತೆಯಿಂದ ಪ್ರಶ್ನಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಿಂದ ಜನರು ಬಲವಂತವಾಗಿ ಖಾಸಗಿ ಆಸ್ಪತ್ರೆಗಳತ್ತ ಮುಖಮಾಡುತ್ತಿದ್ದಾರೆ. ಆದರೆ, ಅಲ್ಲಿ ಚಿಕಿತ್ಸೆ ವೆಚ್ಚ ಹೊರೆಯಾಗಿದ್ದು, ಬಡ ಜನರಿಗೆ ಸಂಕಷ್ಟವಾಗಿದೆ. ಸರ್ಕಾರದ ಆರೋಗ್ಯ ವ್ಯವಸ್ಥೆ ವಿಫಲವಾದಾಗ, ಬಡವರು ಎಲ್ಲಿ ಹೋಗಬೇಕು ? ಇಂತಹ ಗಂಭೀರ ಸಮಸ್ಯೆಯಿದ್ದರೂ ಜಿಲ್ಲಾ ಹಾಗೂ ತಾಲೂಕು ವೈದ್ಯಾಧಿಕಾರಿಗಳ ಗಮನವೇ ಇತ್ತ ಇಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಅಲ್ಲದೆ, ವೈದ್ಯರ ಕೊರತೆ ಮುಂದುವರಿದರೆ ಯಾವುದೇ ಕ್ಷಣದಲ್ಲಿ ಅನಾಹುತ ಸಂಭವಿಸುವ ಸಾಧ್ಯತೆ ಇದೆ ಎಂಬ ಆತಂಕ ಗ್ರಾಮಸ್ಥರಲ್ಲಿ ಮನೆಮಾಡಿದೆ.
ನಿರಂತರ ವೈದ್ಯಕೀಯ ಸೇವೆ ನೀಡಿ: ಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಾಯಂ ವೈದ್ಯರನ್ನು ನೇಮಕ ಮಾಡಬೇಕು. ದಿನದ 24 ಗಂಟೆಯೂ ವೈದ್ಯಕೀಯ ಸೇವೆ ಖಚಿತಪಡಿಸಬೇಕು. ಹೆರಿಗೆ ಮತ್ತು ತುರ್ತು ಚಿಕಿತ್ಸೆಗೆ ಅಗತ್ಯ ಸೌಲಭ್ಯಗಳನ್ನು ಬಲಪಡಿಸಬೇಕು. ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬುದು ಜನರ ಆಗ್ರಹವಾಗಿದೆ. ಇನ್ನೂ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಹಟ್ಟಿಯಲ್ಲಿ ಜನರ ಆಕ್ರೋಶವೇ ಹೋರಾಟವಾಗಿ ರೂಪುಗೊಳ್ಳುವುದು ಖಚಿತ ಎನ್ನುತ್ತಾರೆ ಸ್ಥಳೀಯರು.
"

ಜೀವ ಉಳಿಸುವ ವೈದ್ಯರೇ ಹಟ್ಟಿ ಪಟ್ಟಣದ ಆಸ್ಪತ್ರೆ ಎಂದರೆ ನಿರ್ಲಕ್ಷ್ಯ ತೋರುತ್ತಾರೆ. ಸಾವಿರಾರು ಜನ ಚಿಕಿತ್ಸೆಗೆ ಹಟ್ಟಿ ಆಸ್ಪತ್ರೆಯನ್ನೇ ಅವಲಂಬಿಸಿದ್ದು, ತಕ್ಷಣವೇ ಸರ್ಕಾರ ವೈದ್ಯರನ್ನು ನೇಮಕ ಮಾಡಿ, ಸಮರ್ಪಕ ಚಿಕಿತ್ಸೆಗೆ ಅನುಕೂಲ ಕಲ್ಪಿಸಬೇಕು. ಇಲ್ಲವಾದಲ್ಲಿ ವೈದ್ಯರನ್ನು ನೇಮಿಸುವವರೆಗೂ ಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆ ಧರಣಿ ಸತ್ಯಾಗ್ರಹ ಮಾಡಲಾಗುವುದು.

— > ಬಸವರಾಜ ನಾಯಕ, ಸ್ಥಳಿಯ ನಿವಾಸಿ
"

ಹಟ್ಟಿಚಿನ್ನದಗಣಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅನ್ವರಿ ಹಾಗೂ ಗೆಜ್ಜಲಗಟ್ಟಾ ಆಸ್ಪತ್ರೆಯ ಇಬ್ಬರು ವೈದ್ಯರು ಮತ್ತು ಓರ್ವ ಆಯುಷ್ ವೈದ್ಯರನ್ನು ತಾತ್ಕಾಲಿಕವಾಗಿ ನಿಯೋಜಿಸಲಾಗಿದೆ. ಕಾಯಂ ವೈದ್ಯರ ನೇಮಕಕ್ಕೆ ಕ್ರಮವಹಿಸಲಾಗುವುದು. — > ಡಾ.ಸುರೇಂದ್ರಬಾಬು, ಡಿಎಚ್‌ಒ, ರಾಯಚೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net