ಗಾಳಿಗೆ ಹಾರಿ ಹೋದ ತಗಡಿನ ಶೆಡ್‌ಗಳು

ಹರ್ವಾಪುರದಲ್ಲಿ ಗಾಳಿ-ಮಳೆಗೆ ತಗಡಿನ ಶೆಡ್‌ಗಳು ಕಿತ್ತು ಹೋಗಿರುವುದು
ಹರ್ವಾಪುರದಲ್ಲಿ ಗಾಳಿ-ಮಳೆಗೆ ತಗಡಿನ ಶೆಡ್‌ಗಳು ಕಿತ್ತು ಹೋಗಿರುವುದು
Published on
ಕವಿತಾಳ: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಗುರುವಾರ ರಾತ್ರಿ ಸುರಿದ ಮಳೆ-ಗಾಳಿಗೆ ವಿವಿಧೆಡೆ  ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಹಲವು ಮನೆಗಳಿಗೆ ಹಾನಿಯಾಗಿದೆ. 
ಪಟ್ಟಣದ ಮುಖ್ಯರಸ್ತೆ ಪಕ್ಕದ ಕಂಬದ ವೈರ್ ತುಂಡಾಗಿದ್ದರಿಂದ ವಿದ್ಯುತ್ ಕಡಿತಗೊಳಿಸಲಾಯಿತು. ಪಾಮನಕಲ್ಲೂರು ಗ್ರಾಪಂ ವ್ಯಾಪ್ತಿಯ ಹರ್ವಾಪುರದಲ್ಲಿ ಗಾಳಿಯ ರಭಸಕ್ಕೆ ಮನೆ ಹಂಚುಗಳು ಹಾರಿ ಹೋಗಿವೆ. ಬಸವರಾಜ ರಾಮಣ್ಣ, ಪರಶುರಾಮ ಎನ್ನುವರ ಮನೆಗೆ ಹಾಕಿದ ಶೆಡ್‌ಗಳು ಕಿತ್ತು ಹೋಗಿವೆ.
 ಕುಪ್ಪಣ್ಣ ಅವರ ಮನೆೆಯ ಗೋಡೆ ಕುಸಿದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ವಿದ್ಯುತ್ ಕಂಬಗಳು ಬಿದ್ದಿದ್ದರಿಂದ ವಟಗಲ್, ಅಮೀನಗಡ, ತೋರಣದಿನ್ನಿ, ಪಾಮನಕಲ್ಲೂರು ಗ್ರಾಪಂ ವ್ಯಾಪ್ತಿಯಲ್ಲಿ ವಿದ್ಯುತ್ ಇಲ್ಲದೆ ಜನರು ಜಾಗರಣೆ ಮಾಡಬೇಕಾಯಿತು. 

ಧಾರಾಕಾರ ಮಳೆಗೆ ತಂಪಾದ ಭೂಮಿ

ಮಸ್ಕಿ: ಪಟ್ಟಣ ಸೇರಿ ತಾಲೂಕಿನ ವಿವಿಧೆಡೆ ಶುಕ್ರವಾರ ಬೆಳಗ್ಗೆ ಧಾರಾಕಾರ ಮಳೆಯಾಗಿದ್ದು, ಬಿರು ಬಿಸಿಲಿನ ಝಳಕ್ಕೆ ಹೈರಾಣಾಗಿದ್ದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. 

ಕಳೆದೊಂದು ವಾರದಿಂದ ಪಟ್ಟಣದಲ್ಲಿ 41 ಡಿಗ್ರಿ ಸೆಲ್ಸಿಯಸ್ ಬಿಸಲಿಗೆ ಜನ ತತ್ತರಿಸಿದ್ದರು. ಬೆಳಗ್ಗೆ 11 ಗಂಟೆ  ನಂತರ ಹೊರಗೆ ಬರಲು ಹೆದರುತ್ತಿದ್ದರು. ಸಂಜೆ 5 ಗಂಟೆ ನಂತರ ಹೊರಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಧ್ಯಾಹ್ನ ವೇಳೆ ಮಾರುಕಟ್ಟೆಯಲ್ಲಿ ಅಂಗಡಿ ಮುಂಗಟ್ಟುಗಳು ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿದ್ದವು. 

ಶುಕ್ರವಾರ ಬೆಳಗ್ಗೆ ಸುಮಾರು ಅರ್ಧ ಗಂಟೆ ಬಿಟ್ಟು ಬಿಡದೇ ಸುರಿದ ಮಳೆಯಿಂದ ರಸ್ತೆ ಹಾಗೂ ಚರಂಡಿಗಳಲ್ಲಿದ್ದ ಕಸ ಕಡ್ಡಿಗಳೆಲ್ಲ ಕೊಚ್ಚಿಕೊಂಡು ಹೋಗಿವೆ. ಒಣಗಿದ್ದ ಹಿರೇಹಳ್ಳಕ್ಕೆ ನೀರು ಹರಿದು ಬಂದಿದೆ. ಹೊಲಗಳ ತುಂಬ ನೀರು ಹರಿದಾಡಿದ್ದು, ಭೂಮಿ ತಂಪಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net