ಅಕ್ರಮ ಮರಂ ಗಣಿಗಾರಿಕೆಗಿಲ್ಲ ತಡೆ!

ರಾಯಚೂರು ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮರಂ ಗಣಿಗಾರಿಕೆ
ರಾಯಚೂರು ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮರಂ ಗಣಿಗಾರಿಕೆ
Published on

ಪ್ರಮುಖ ಮುಖ್ಯಾಂಶಗಳು

  • ದಂಧೆ ಕೋರರಿಗೆ ಅಧಿಕಾರಿಗಳ ಶ್ರೀರಕ್ಷೆ
  • ಸ್ಥಳೀಯರಿಗೆ ಆರೋಗ್ಯ ಸಮಸ್ಯೆ
  • ಕ್ರಮ ವಹಿಸದ ಅಧಿಕಾರಿಗಳು
ರಾಯಚೂರು
ಜಿಲ್ಲಾ ಕೇಂದ್ರದಿಂದ ಅನತಿ ದೂರದ ವಡವಟ್ಟಿ ಗ್ರಾಮದಲ್ಲಿ ಕಳೆದ ಒಂದು ದಶಕದಿಂದ ನಿರಂತರವಾಗಿ ಮರಂ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೂ, ಕ್ರಮಕ್ಕೆ ಮುಂದಾಗಬೇಕಾದ ಜಿಲ್ಲಾಡಳಿತ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಾತ್ರ ಮೌನವಹಿಸಿದ್ದು, ದಂಧೆಕೋರರು ತಾವು ಆಡಿದ್ದೇ ಆಟವಾಗಿದ್ದು, ಮರಂ ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳಲು ದೂರು ಬಂದರೂ ಜಿಲ್ಲಾಡಳಿತದ ಸ್ಪಂದನೆ ಅಷ್ಟಕ್ಕಷ್ಟೆ ಎಂಬಂತಾಗಿದೆ. ’

ಸರ್ಕಾರಕ್ಕೆ ರಾಯಲ್ಟಿ ಪಾವತಿಸದೇ ಮರಂ ಗಣಿಗಾರಿಕೆಗೆ ಮುಂದಾಗಿದ್ದು, ಜಿಲ್ಲಾಡಳಿತ ಗಮನಕೊಡ ದಿರುವುದು ಅಕ್ರಮ ನಡೆಸುವವರಿಗೆ ಅನುಕೂಲ ಕಲ್ಪಿಸಿದಂತೆ ಕಾಣುತ್ತಿದೆ.

ನಿಲ್ಲದ ಮರಂ ಗಣಿಗಾರಿಕೆ
ತಾಲೂಕಿನ ವಡವಟ್ಟಿ ಸೇರಿದಂತೆ ವಿವಿಧ ಗ್ರಾಮದಲ್ಲಿ ಅಂದಾಜು 4 ಕ್ಕೂ ಹೆಚ್ಚು ಮರಂ ಕ್ವಾರಿಗಳಿದ್ದು, ಈ ಕ್ವಾರಿಯಲ್ಲಿ ಮರಂ ಪಡೆಯಲು ಭೂಮಿ ಆಗೆಯಲಾಗುತ್ತಿದೆ ಎಂಬ ಆರೋಪ ಗ್ರಾಮಸ್ಥರಿಂದ ಕೇಳಿಬಂದಿದೆ. ಮರಂಗಾಗಿ ಗಣಿಗಾರಿಕೆ ಮಾಡುವವರು ಭೂಮಿಯನ್ನು 3 ಅಡಿಗಿಂತ ಹೆಚ್ಚು ಆಳವಾಗಿ ಅಗೆಯುವ ಮೊದಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಪರವಾನಗಿ ಪಡೆಯಬೇಕು. ರಾಯಲ್ಟಿ ಪಾವತಿಸಬೇಕೆಂದಿದೆ. ಆದರೆ ವಡವಟ್ಟಿ ಬಳಿ ನಡೆಯುತ್ತಿರುವ ಮರಂ ಕ್ವಾರಿ ನಡೆಸುವವರು ಪರವಾನಗಿ ಪಡೆಯದೇ ಪ್ರತಿ ನಿತ್ಯ ಭೂಮಿಯನ್ನು ಅಗೆದು ಮರಂ ಮಾರಾಟ ಮಾಡುತ್ತಿದ್ದಾರೆ. ಹಾಡಹಗಲೇ ಭೂಮಿಯ ಒಡಲನ್ನು ಬಗೆದು ಗಣಿಗಾರಿಕೆ ಮಾಡಲಾಗುತ್ತಿದೆ ಅಕ್ರಮದ ಈ ಗಣಿಗಾರಿಕೆಗೆ ಸಾಥ್ ಕೊಟ್ಟಿದ್ದಾರೆ.
ಇಲ್ಲಿ ನಡೆಯುವ ಅಕ್ರಮ ಮರಂ ಗಣಿಗಾರಿಕೆಗೆ ಕೆಲ ಅಧಿಕಾರಿಗಳು, ಪುಡಿ ರಾಜಕಾರಣಿಗಳು ಕೂಡಾ ಈ ಅಕ್ರಮಕ್ಕೆ ಸಾಥ್ ನೀಡುತ್ತಿರುವುದರಿಂದ ಹೀಗಾಗಿ ಕಳೆದೊಂದು ದಶಕದಿಂದ ಅವ್ಯಾಹತವಾಗಿ ಮರಂ ಗಣಿಗಾರಿಕೆ ನಡೆಯುತ್ತಿದ್ದರೂ ಇದಕ್ಕೆ ಬ್ರೇಕ್ ಹಾಕುವ ಕೆಲಸಕ್ಕೆ ಯಾರೊಬ್ಬರೂ ಕೈ ಹಾಕಿಲ್ಲ.

ಅನಾರೋಗ್ಯ ಸಮಸ್ಯೆ

ರಾಯಚೂರು ತಾಲೂಕಿನ ವಡವಟ್ಟಿ ಗ್ರಾಮದಲ್ಲಿ ಅಕ್ರಮ ಮರಂ ಸಾಗಿಸಲು ಬೃಹತ್ ಟಿಪ್ಪರ್‌ಗಳು ಹಗಲು ರಾತ್ರಿ ಎನ್ನದೇ ರಸ್ತೆಯಲ್ಲಿ ಸಂಚರಿಸುತ್ತಿದ್ದು, ಗ್ರಾಮಸ್ಥರಿಗೆ ಕಿರಿಕಿರಿಯಾಗಿದೆ. ಆಕ್ರಮ ಮರಂ ಗಣಿಗಾರಿಕೆಯಿಂದ ಉಂಟಾಗುವ ಧೂಳಿನಿಂದ ಮಕ್ಕಳು, ವೃದ್ಧರು ಹಾಗೂ ಮಹಿಳೆಯರ ಆರೋಗ್ಯದ ಮೇಲೆ ಪರಿಣಾಮ ಬೀರಿದ್ದು, ಅನಾರೋಗ್ಯ ಸಮಸ್ಯೆ ಉಂಟಾಗಿದೆ.

ರೈತರಿಗೆ ತೊಂದರೆ
ವಡವಟ್ಟಿ ಗ್ರಾಮದಲ್ಲಿ ಅಕ್ರಮ ಮರಂ ಗಣಿಗಾರಿಕೆಯಿಂದ ರೈತರಿಗೆ ಬಹಳ ತೊಂದರೆ ಉಂಟಾಗಿದೆ. ಅಲ್ಲದೇ ಗಣಿಗಾರಿಕೆ ನಡೆಯುತ್ತಿರುವ ಸುತ್ತಮುತ್ತ ಜಮೀನುಗಳಿದ್ದು, ರೈತರು ತರಕಾರಿ, ಸೇಂಗಾ, ತೊಗರಿ ಬೆಳೆದಿದ್ದಾರೆ. ಆದರೆ ಮರಂ ಅಗೆಯುತ್ತಿರುವುದರಿಂದ ಧೂಳು ಬಂದು ಬೀಳುತ್ತಿರುವುದರಿಂದ ಬೆಳೆಗೆ ನಷ್ಟ ಉಂಟಾಗುತ್ತಿದೆ. ಈ ಕುರಿತು ಸಾಕಷ್ಟು ಸಲ ತಾಲೂಕು ದಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಹಾಗೂ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಕ್ರಮ ಮರಳುಗಾರಿಕೆ ಮಾಡುತ್ತಿರುವವರ ಅಡ್ಡೆಯ ಮೇಲೆ ನಿರಂತರವಾಗಿ ಇಲಾಖೆ ದಾಳಿ ಮಾಡಿ ದಂಡ ವಿಧಿಸಲಾಗುತ್ತದೆ.

ತಾಲೂಕಿನ ವಡವಟ್ಟಿ ಗ್ರಾಮದಲ್ಲಿ ಒಬ್ಬರಿಗೆ ಮಾತ್ರ ಪರವಾನಿಗೆ ನೀಡಲಾಗಿದೆ. ಆಕ್ರಮವಾಗಿ ಮರಂ ಗಣಿಗಾರಿಕೆ ಮಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.
ಮುತ್ತಪ್ಪ ಪಿ. ಹಿರಿಯ ಭೂ ವಿಜ್ಞಾನಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ರಾಯಚೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net