ದೇವದುರ್ಗ: ತಾಲೂಕಿನಲ್ಲಿ ಗಬ್ಬೂರು ಬಹುದೊಡ್ಡ ಹೋಬಳಿಯಾಗಿದ್ದು, ಕೆಲವರ್ಷಗಳ ಹಿಂದೆ ಗ್ರಂಥಾಲಯವನ್ನು ಡಿಜಿಟಲ್ ಲೈಬ್ರರಿಯಾಗಿ ಮೇಲ್ದರ್ಜೆಗೇರಿಸಲಾಗಿದೆ. ಆದರೆ, ನಿರ್ವಹಣೆ ಕೊರತೆಯಿಂದ ಸಮಸ್ಯೆಗಳು ತಲೆದೋರುತ್ತಿದ್ದು, ಓದುಗರು ಕಿರಿಕಿರಿ ಅನುಭವಿಸುವಂತಾಗಿದೆ.
ಡಿಜಿಟಲ್ ಗ್ರಂಥಾಲಯದಲ್ಲಿ ಕುಡಿವ ನೀರು, ಸ್ವಚ್ಛತೆ ಸಮಸ್ಯೆ, ಫ್ಯಾನ್ ರಿಪೇರಿ, ಸ್ಪರ್ಧಾತ್ಮಕ ಮಾಸಪತ್ರಿಕೆ, ಇಂಗ್ಲಿಷ್ ಪತ್ರಿಕೆಗಳ ಬೇಡಿಕೆಯಿದ್ದರೂ ಸ್ಪಂದಿಸುತ್ತಿಲ್ಲ ಎನ್ನುವ ಆರೋಪವಿದೆ. ಇದರಿಂದ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ನಡೆಸುತ್ತಿರುವ ಯುವಕರಿಗೆ ಸಮಸ್ಯೆಯಾಗುತ್ತಿದೆ.
ಡಿಜಿಟಲ್ ಗ್ರಂಥಾಲಯವನ್ನು ಪಟ್ಟಣ ಮಾತ್ರವಲ್ಲ ಸುತ್ತಮುತ್ತಲಿನ ಹಳ್ಳಿಗಳ ವಿದ್ಯಾರ್ಥಿಗಳು, ಯುವಕರು, ಓದುಗರು ಅವಲಂಬಿಸಿದ್ದಾರೆ. ಸುಸಜ್ಜಿತ ಕಟ್ಟಡವಿದ್ದು ಅಗತ್ಯ ಸೌಲಭ್ಯ ಕಲ್ಪಿಸಲಾಗಿತ್ತು. ಆದರೆ, ನಿರ್ವಹಣೆ ಇಲ್ಲದೆ ದಿನೇದಿನೆ ಡಿಜಿಟಲ್ ಕಣ್ಮರೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಹಲವು ದಿನಗಳಿಂದ ಫ್ಯಾನ್‌ಗಳು ಕೆಟ್ಟಿವೆ. ಬಿಸಿಲಿನ ಸೆಕೆಯಿಂದ ಗ್ರಂಥಾಲಯದಲ್ಲಿ ಓದುಗರು ತೊಂದರೆ ಅನುಭವಿಸುತ್ತಿದ್ದಾರೆ.
ಶುದ್ಧ ಕುಡಿವ ನೀರಿನ ಕೊರತೆಯಿದೆ. ಯುವಕರು ಬಾಟಲ್‌ನಲ್ಲಿ ನೀರುತಂದು ಕುಡಿವ ಸ್ಥಿತಿಯಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅಲ್ಲದೆ ಮಾಸ ಪತ್ರಿಕೆಗಳು, ಸ್ಪರ್ಧಾತ್ಮಕ ಪರೀಕ್ಷೆಗಳ ಪತ್ರಿಕೆಗಳು, ಪುಸ್ತಕಗಳು ಹಾಗೂ ಇಂಗ್ಲಿಷ್ ಪತ್ರಿಕೆಗಳು ಹಲವು ದಿನಗಳಿಂದ ಗ್ರಂಥಾಲಯಕ್ಕೆ ಬರುತ್ತಿಲ್ಲ. ಗ್ರಾಪಂಗೆ ಯುವಕರು ಹಲವು ಸಲ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಸರ್ಕಾರ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ.
ಇಂಥ ಸಂದರ್ಭದಲ್ಲಿ ಯುವಕರು ಸಿಇಟಿಗೆ ತಯಾರಿ ನಡೆಸುತ್ತಿದ್ದಾರೆ. ಮಾಸ, ಸ್ಪರ್ಧಾತ್ಮಕ, ಇಂಗ್ಲಿಷ್ ಪತ್ರಿಕೆಯಿಲ್ಲದೆ ಸಮಸ್ಯೆಯಾಗುತ್ತಿದೆ ಎಂದು ಯುವಕ ಎಂ.ಬಿ.ನಿಜವಂತ ಸೇರಿ ಇತರರು ಆರೋಪಿಸಿದ್ದಾರೆ. ಇನ್ನಾದರೂ ಗ್ರಾಪಂ ಆಡಳಿತ ಸಮಸ್ಯೆಗೆ ಸ್ಪಂದಿಸಬೇಕಿದೆ.
"
ಗ್ರಂಥಾಲಯದಲ್ಲಿ ಫ್ಯಾನ್ ಕೆಟ್ಟಿದ್ದು ರಿಪೇರಿಗೆ ನೀಡಲಾಗಿದೆ. ಸ್ವಚ್ಛತೆ, ನವೀಕರಣ ಕೆಲಸ ಮಾಡುತ್ತಿದ್ದು ಶೀಘ್ರ ಫ್ಯಾನ್ ಜೋಡಿಸುತ್ತೇವೆ. ಡಿಜಿಟಲ್ ಲೈಬ್ರರಿ ಮಾಡಿ ಎಲ್ಲ ಸೌಲಭ್ಯ ಕಲ್ಪಿಸಲಾಗಿದೆ. ಒಂದೆರಡು ದಿನ ಪತ್ರಿಕೆ ಬರುವುದು ಸಮಸ್ಯೆಯಾಗಿರಬಹುದು. ಸಣ್ಣಪುಟ್ಟ ಸಮಸ್ಯೆಗೆ ಪರಿಹಾರ ಒದಗಿಸಲಾಗುವುದು.