ದೇವದುರ್ಗದ ಗೌತಮ್ ವಾರ್ಡ್‌ನಲ್ಲಿ ಜೀರ್ಣೋದ್ಧಾರಗೊಂಡ ಶ್ರೀ ಮರಿಗೆಮ್ಮ, ಶ್ರೀ ತಾಯಮ್ಮ ದೇವಸ್ಥಾನಕ್ಕೆ ಶಾಸಕಿ ಕರೆಮ್ಮ ಜಿ.ನಾಯಕ ಭೇಟಿ ನೀಡಿ ದರ್ಶನ ಪಡೆದರು. ಪುರಸಭೆ ಮಾಜಿ ಸದಸ್ಯ ಚಂದ್ರಶೇಖರ ಛಲವಾದಿ, ಪ್ರಮುಖರಾದ ರಂಗಪ್ಪ ಛಲವಾದಿ, ಲಕ್ಷ್ಮಣ, ಶಿವಪ್ಪ ದೊಡ್ಡಮನಿ ಇದ್ದರು.
ದೇವದುರ್ಗ: ತಾಲೂಕಿನ ಜನರಿಗೆ ಮೂಲಸೌಲಭ್ಯ ಕಲ್ಪಿಸಲು ಮೊದಲ ಆದ್ಯತೆ ನೀಡಿದ್ದೇನೆ. ಸಮಸ್ಯೆಗೆ ಸ್ಪಂದಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು, ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ ಎಂದು ಶಾಸಕಿ ಕರೆಮ್ಮ ಜಿ.ನಾಯಕ ಹೇಳಿದರು.
ಪಟ್ಟಣದ ಗೌತಮ್ ವಾರ್ಡ್‌ನಲ್ಲಿ ಜೀರ್ಣೋದ್ಧಾರಗೊಂಡ ಶ್ರೀ ಮರಿಗೆಮ್ಮದೇವಿ ಹಾಗೂ ಶ್ರೀ ತಾಯಮ್ಮ ದೇವಿ ದೇವಸ್ಥಾನಗಳನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಸಾರ್ವಜನಿಕರಿಗೆ ಕುಡಿವ ನೀರು, ಚರಂಡಿ, ರಸ್ತೆ ಸೇರಿ ವಿವಿಧ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಪರಿಹರಿಸಲಾಗುತ್ತಿದೆ. ಐತಿಹಾಸಿಕ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಅನುದಾನ ಮಂಜೂರು ಮಾಡಲಾಗಿದೆ. 2 ದೇವಸ್ಥಾನಗಳ ಅಭಿವೃದ್ಧಿಗೆ ತಲಾ 5 ಲಕ್ಷ ರೂ. ಅನುದಾನ ನೀಡಲಾಗಿತ್ತು. ದೇವಸ್ಥಾನಗಳು ಐತಿಹಾಸಿಕ ಪರಂಪರೆ, ಇತಿಹಾಸವನ್ನು ಹೊಂದಿವೆ.
ಭಕ್ತರ ಅನುಕೂಲಕ್ಕಾಗಿ ದೇವಾಲಯಗಳಿಗೆ ಮೂಲಸೌಲಭ್ಯ ಕಲ್ಪಿಸಲಾಗಿದೆ. ವಿವಿಧ ಯೋಜನೆಗಳನ್ನು ಬಳಸಿಕೊಂಡು ಗ್ರಾಮೀಣ ಭಾಗಕ್ಕೆ ಅನುದಾನ ಹಂಚಿಕೆ ಮಾಡಲಾಗಿದೆ. ನೂರಾರು ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಗೌತಮ್ ವಾರ್ಡ್‌ಗೆ ವಿವಿಧ ಕಾಮಗಾರಿಗೆ ಅನುದಾನ ಮಂಜೂರು ಮಾಡಲಾಗುವುದು ಎಂದು ತಿಳಿಸಿದರು.