ಪಾದಚಾರಿ ದಾರಿ ಮಾಯಾ!

 ರಾಯಚೂರಿನ ಬಂಗಾರ ಬಜಾರ ರಸ್ತೆಯಲ್ಲಿ ಪುಟ್‌ಪಾತ್‌ನಲ್ಲಿ ಪೂಜಾ ಸಾಮಾಗ್ರಿ ಅಂಗಡಿ ಹಾಕಿರುವುದು.
ರಾಯಚೂರಿನ ಬಂಗಾರ ಬಜಾರ ರಸ್ತೆಯಲ್ಲಿ ಪುಟ್‌ಪಾತ್‌ನಲ್ಲಿ ಪೂಜಾ ಸಾಮಾಗ್ರಿ ಅಂಗಡಿ ಹಾಕಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಕಾಟಚಾರದ ಪಾದಚಾರಿ ತೆರವು
  • ವಾಹನ ಸಾಗುವ ರಸ್ತೆಯಲ್ಲಿ ಜನ ಸಂಚಾರ
  • ವ್ಯಾಪಾರಿಗಳಿಂದ ಪುಟ್‌ಪಾತ್ ಅತಿಕ್ರಮ?
ರಾಯಚೂರು

ದಿನೇ ದಿನೇ ಬೆಳವಣಿಗೆ ಕಾಣುತ್ತಿರುವ ರಾಯಚೂರುಯ ನಗರದ ಪ್ರಮುಖ ರಸ್ತೆಗಳು ಒತ್ತುವರಿ ಯಾಗಿರುವುದರಿಂದ ಜನರು ಸುಗಮವಾಗಿ ಸಂಚಾರ ಮಾಡಲು ಪಾದಚಾರಿ ಮಾರ್ಗಗಳೇ ಇಲ್ಲವಾಗಿದೆ.

ನಗರದಲ್ಲಿ ಸುಮಾರು 4 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ನಗರವನ್ನು ಕಳೆದ ವರ್ಷ ಸರ್ಕಾರ ನಗರಸಭೆಯಿಂದ ಮಹಾನಗರ ಪಾಲಿಕೆಯಾಗಿ ಮೇಲ್ದಾರ್ಜೆಗೆ ಏರಿಸಿದ್ದು, ನಗರದ ವ್ಯಾಪ್ತಿ ವಿಸ್ತಾರಗೊಳ್ಳುತ್ತಲೇ ಇದೆ. ಆದರೆ ಬಹುತೇಕ ರಸ್ತೆಗಳಲ್ಲಿನ ಪಾದಚಾರಿ ಮಾರ್ಗಗಳು ನಾಪತ್ತೆಯಾಗಿವೆ. ಹೀಗಾಗಿ, ಪಾದಚಾರಿಗಳು ನಡೆದಾಡಲು ದಾರಿ ಹುಡುಕಬೇಕಾದ ಪರಿಸ್ಥಿತಿ ಬಂದೊದಗಿದೆ. ಕೆಲ ರಸ್ತೆಗಳಲ್ಲಿ ಪಾದಚಾರಿ ಮಾರ್ಗವನ್ನು ಮಹಾನಗರ ಪಾಲಿಕೆಯಿಂದ ನಿರ್ಮಿಸಿದ್ದರೂ ಅವು ಸಾರ್ವಜನಿಕರಿಗೆ ಲಭ್ಯವಾಗುವ ಸ್ಥಿತಿಯಲ್ಲಿ ಇಲ್ಲ.
ಹೆಚ್ಚಾದ ವಾಹನ ಸಂಚಾರ
ನಗರದಲ್ಲಿ ದಿನೇದಿನೆ ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು, ಸಂಚಾರ ದಟ್ಟಣೆ ಸಮಸ್ಯೆ ಬಿಗಡಾಯಿಸುತ್ತಿದೆ. ಕೆಲ ರಸ್ತೆಗಳಲ್ಲಿ ಗುಂಡಿ ಬಿದ್ದಿದ್ದು, ಇದರ ಜತೆಗೆ ಪಾದಚಾರಿ ಮಾರ್ಗದ ಒತ್ತುವರಿ ಆಗಿ ಜನರು ರಸ್ತೆಯಲ್ಲೇ ನಡೆಯಬೇಕಾದ ಪರಿಸ್ಥಿತಿ ನೆಲೆಸಿದೆ. ಕೇವಲ ಮಾರುಕಟ್ಟೆ ರಸ್ತೆ, ಹರಿಹರ ರಸ್ತೆಯಲ್ಲಿ ಮಾತ್ರ ಏಕಮುಖ ಸಂಚಾರವಿದ್ದು, ಆನೇಕರು ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿದ್ದು, ನಿಗದಿತ ಸ್ಥಳದಲ್ಲಿ ವಾಹನಗಳ ನಿಲುಗಡೆ ಮಾಡದಿರುವುದು ಕೂಡ ಸಮಸ್ಯೆ ಉಲ್ಬಣಿಸಲು ಕಾರಣವಾಗಿದೆ.
ಕಾಟಚಾರದ ಪಾದಚಾರಿ ತೆರವು
ಕಳೆದ ವರ್ಷ ಮೊದಲ ಬಾರಿ ಪಾಲಿಕೆ ಅಯುಕ್ತರಾಗಿ ನೇಮಕವಾಗಿದ್ದ ಜುಬಿನ್ ಮಹೋಪಾತ್ರ ಅವರು ಮೊದಲಿಗೆ ನಗರ ಸಂಚಾರ ಮಾಡಿ ಪುಟ್‌ಪಾತ್ ಒತ್ತುವರಿ ಮಾಡಿದ ಅನೇಕ ಮಳಿಗೆಗಳನ್ನು ತೆರವು ಮಾಡಿದ್ದರು. ಕೇವಲ ಒಂದೇ ವಾರದಲ್ಲಿ ವ್ಯಾಪಾರಿಗಳು ಮತ್ತೆ ಪುಟ್‌ಪಾತ್‌ನ್ನು ಒತ್ತುವರಿ ಮಾಡಿದರು. ಅಧಿಕಾರಿಗಳ ಸಮನ್ವಯ ಕೊರತೆಯಿಂದ ಇದನ್ನು ಅಲ್ಲಿಗೆ ಕೈ ಬಿಟ್ಟರು. ಇದರ ಜತೆಗೆ ಸಚಿವ ಕೃಷ್ಣ ಬೈರೇಗೌಡ ನೇತೃತ್ವದಲ್ಲಿ ಬೆಂಗಳೂರು ಸೇರಿದಂತೆ ಹಲವಡೆ ಪುಟಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಜೋರಾಗಿದೆ. ಆದರೆ, ರಾಯಚೂರು ನಗರದಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮೌನವಾಗಿದ್ದಾರೆ.
ಎಲ್ಲೆಲ್ಲಿ ಪಾದಚಾರಿ ಒತ್ತುವರಿ
ನಗರದ ಕೇಂದ್ರ ಬಸ್ ನಿಲ್ಲಾಣದಿಂದ ತೀನ್ ಕಂದಿಲ್ ವರೆಗೆ ರಸ್ತೆಯ ಎರಡು ಬದಿಯಲ್ಲಿ ಮೊಬೈಲ್, ಬಟ್ಟೆ, ಚಪ್ಪಲಿ, ಹೊಟೇಲ್ ಹಾಗೂ ವಾಣಿಜ್ಯ ಮಳಿಗೆಗಳು ಇರುವುದರಿಂದ ಸದಾ ಜನಬೀಡು ಪ್ರದೇಶವಾಗಿದೆ. ಆದರೆ, ಎರಡು ಬದಿಯಲ್ಲಿ ಪಾಲಿಕೆಯಿಂದ ಪುಟ್‌ಪಾತ್ ನಿರ್ಮಿಸಿದರೂ ಅಂಗಡಿ ಮಾಲೀಕರು ಒತ್ತುವರಿ ಮಾಡಿಕೊಂಡಿದ್ದಾರೆ.
ಇದರಿಂದ ಸಾರ್ವಜನಿಕರು ರಸ್ತೆಯಲ್ಲಿ ಸಂಚರಿಸುವ ವಾಹನಗಳ ಮಧ್ಯೆ ಓಡಾಡಬೇಕಾದ ಪರಿಸ್ಥಿತಿಯಾಗಿದೆ. ಅಲ್ಲದೆ, ಚಂದ್ರ ಮೌಳೇಶ್ವರ ವೃತ್ತದಿಂದ ಮಹಾವೀರ ವೃತ್ತ, ಬಂಗಿ ಕುಂಟಾದಿಂದ ಮಹಾವೀರ ವೃತ್ತ, ಬಟ್ಟೆ ಬಜಾರ, ಬಂಗಾರ ಬಜಾರ ರಸ್ತೆಯಲ್ಲೇ ಸಮ - ಬೆಸ ಪಾರ್ಕಿಂಗ್ ಜಾರಿ ಮಾಡಿರುವುದರಿಂದ ವಾಹನಗಳ ಸಂಚಾರಕ್ಕೆ ಕಿರಿದಾಗಿದ್ದು, ಸದರ ಬಾಜಾರ್ ಠಾಣೆ ಮುಂದಿನ ರಸ್ತೆಯಲ್ಲಿ ಪೂಜಾ ಸಾಮಾಗ್ರಿ ಅಂಗಡಿಗಳಿಂದ ಪುಟ್‌ಪಾತ್ ಸಂಪೂರ್ಣವಾಗಿ ಒತ್ತುವರಿಯಾಗಿದೆ. ಜತೆಗೆ ಬಹುತೇಕ ಕಡೆ ಫುಟ್‌ಪಾತ್ ಇಲ್ಲದಿರುವ ಕಾರಣ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ತಿರುಗಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ವರ್ಷಗಳಿಂದ ಇದೇ ಪರಿಸ್ಥಿತಿಯಲ್ಲಿದೆ.
ಪೊಲೀಸರಿಗೆ ಕಿರಿಕಿರಿ
ನಗರದ ಅನೇಕ ರಸ್ತೆಗಳಲ್ಲಿ ವ್ಯಾಪಾರಿಗಳು ಪಾದಚಾರಿ ರಸ್ತೆಗಳನ್ನು ಅತಿಕ್ರಮಣ ಮಾಡಿಕೊಂಡಿದ್ದು, ಇದರಿಂದ ವಾಹನ ಸಂಚಾರದ ರಸ್ತೆಯಲ್ಲಿ ಪಾಚಾರಿಗಳು ಸಂಚಾರ ಮಾಡಲಾಗುತ್ತಿದ್ದು, ಈ ಕುರಿತು ನಗರದಲ್ಲಿ ಪ್ರತ್ಯೇಕವಾಗಿ ಪಾರ್ಕಿಂಗ್ ವ್ಯವಸ್ಥೆ ಮಾಡಲು ಈ ಹಿಂದೆ ನಿಖಿಲ್ ಅವರು ಎಸ್ಪಿಯಾಗಿದ್ದ ಸಂದರ್ಭದಲ್ಲಿ ಜಿಲ್ಲಾಡಳಿತ ಹಾಗೂ ನಗರಸಭೆ ( ಇಂದಿನ ಮಹಾನಗರ ಪಾಲಿಕೆ)ಗೆ ಮನವಿ ಸಲ್ಲಿಸಿದ್ದರು. ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಪ್ರತಿದಿನ ಸಂಜೆ 4ರಿಂದ 8ರವರೆಗೆ ಟ್ರಾಫಿಕ್ ಕಿರಿ ಕಿರಿ ಆಗುತ್ತಿದ್ದು,ಜನರು ಪಾರ್ಕಿಂಗ್ ಸಮಸ್ಯೆಯಿಂದ ನೋ ಪಾರ್ಕಿಗ್ ಸ್ಥಳದಲ್ಲಿ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ಅವರಿಗೆ ವಲ್ಲದ ಮನಸ್ಸಿನಿಂದ ಪೊಲೀಸರು ದಂಡ ಹಾಕುವ ಸ್ಥಿತಿ ನಗರದಲ್ಲಿ ನಿರ್ಮಾಣವಾಗಿದೆ.
ನಗರದ ಬಹುತೇಕ ಪಾದಚಾರಿ ರಸ್ತೆಗಳನ್ನು ವ್ಯಾಪಾರಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಹಿಂದೆ ಅನೇಕ ಕಡೆ ತೆರವು ಮಾಡಲಾಗಿತ್ತು ಅಧಿಕಾರಿಗಳ ಸಮನ್ವಯ ಕೊರತೆಯಿಂದ ಅರ್ಧಕ್ಕೆ ನಿಲ್ಲಿಸಲಾಯಿತು. ಈಗಾಗಲೇ ಬೆಂಗಳೂರಿನಲ್ಲಿ ಪಾಲಿಕೆಯಿಂದ ಪುಟ್‌ಪಾತ್ ತೆರವು ಮಾಡಲಾಗುತ್ತಿದ್ದು, ನಗರದ ಆ.24 ರಿಂದ ಅಧಿಕಾರಿಗಳ ಸಭೆ ಕರೆದು ಪುಟ್‌ಪಾತ್ ತೆರವು ಮಾಡಲಾಗುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net